Mysore
23
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು, ಸ್ವಚ್ಛಂದವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದೇ ನಮ್ಮ ಸರ್ಕಾರದ ಹಾಗೂ ನನ್ನ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮಹಿಳಾ ನೌಕರರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮಹಿಳೆಯರಿಗೆ ಇರುವುದು ಒಂದೇ ಜಾತಿ, ಮಹಿಳೆಯರಿಗೆ ಬೇರೆ ಜಾತಿ ಇಲ್ಲ, ಪಕ್ಷ ಇಲ್ಲ. ಮಹಿಳೆಯರ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸಿದ್ದರಾಮಯ್ಯನವರ ಸರ್ಕಾರ ಮಹಿಳಾ ನೌಕರರಿಗೆ ಹಾಗೂ ಸಾಮಾನ್ಯ ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ತಂದಿದೆ ಎಂದು ಸಚಿವರು ಹೇಳಿದರು.

ಇದನ್ನು ಓದಿ: ಅಕ್ರಮ ರಕ್ತಚಂದನ ಸಾಗಾಟ: ನಾಲ್ವರ ಬಂಧನ

ಒಂದು ಕಾಲದಲ್ಲಿ ಸತಿ ಸಹಗಮನ ಪದ್ದತಿ ಇತ್ತು. ಹಿಂದೆ ಗಂಡ ತೀರಿಕೊಂಡ ಮೇಲೆ ಹೆಣ್ಣು ತಲೆ ಬೋಳಿಸಿಕೊಳ್ಳಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾಗಿದೆ. ಮಹಿಳೆಯರು ಸ್ವಂತ ಶಕ್ತಿಯ ಮೇಲೆ ನೌಕರಿ ಗಿಟ್ಟಿಕೊಂಡು ಮಾದರಿಯಾಗುತ್ತಿದ್ದಾರೆ ಎಂದರು.

ಸರ್ಕಾರದ ಪ್ರತಿನಿಧಿಗಳಾಗಿ ನಾವು ಮೂರನೇ ಮಹಡಿಯಲ್ಲಿ ಯೋಜನೆಗಳನ್ನು ರೂಪಿಸಿದರೂ ಅದನ್ನು ಕಾರ್ಯರೂಪಕ್ಕೆ ತರುವುದು ಸರ್ಕಾರಿ ನೌಕರರು. ಸರ್ಕಾರದ ಯೋಜನೆಗಳ ಯಶಸ್ಸಿನಲ್ಲಿ ನೌಕರರ ಪಾತ್ರ ದೊಡ್ಡದು ಎಂದು ಹೇಳಿದರು.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳಾ ಸಬಲೀಕರಣಕ್ಕಾಗಿ ಮೂರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹ ಇಲಾಖೆ ಸಹಯೋಗದಲ್ಲಿ ಅಕ್ಕ ಪಡೆಯನ್ನು ಜಾರಿಗೊಳಿಸಲಾಗಿದೆ. 31 ಜಿಲ್ಲೆಗಳಲ್ಲಿ ಅಕ್ಕ ಪಡೆ ಚಾಲ್ತಿಗೆ ಬರಲಿದೆ. ಇದರ ಬಗ್ಗೆ ಮಹಿಳಾ ನೌಕರರ ಜೊತೆಗೂಡಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ನಮ್ಮ ಇಲಾಖೆಯ ಕಚೇರಿಯಲ್ಲಿ ಮಹಿಳಾ ನೌಕರರ ಸಂಘದ ಕಚೇರಿಗೆ ಜಾಗ ನೀಡಲಾಗುವುದು, ಈ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ಮಾತನಾಡಲಾಗುವುದು ಎಂದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಆರತಿ ಕೃಷ್ಣ, ಬಿಲ್ಕಿಶ್ ಭಾನು, ಕಾನೂನು ಆಯೋಗದ ‌ಆಧ್ಯಕ್ಷರಾದ ಅಶೋಕ್ ಹಿಂಚಗೇರಿ, ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ರೋಶಿನಿ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ನೌಕರರು ಉಪಸ್ಥಿತರಿದ್ದರು.

Tags:
error: Content is protected !!