Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಕಾಲ್ತುಳಿತ | ಮೃತ ಭೂಮಿಕ್‌ ಮನೆಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಭೇಟಿ, ನ್ಯಾಯ ಕೊಡಿಸುವ ಭರವಸೆ

ಹಾಸನ : ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಭೂಮಿಕ್‌ ಅವರ ಮನೆಗೆ ಪ್ರತಿಪಕ್ಷ ನಾಯಕರಾದ ಆರ್‌.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತ ವಿದ್ಯಾರ್ಥಿ ಭೂಮಿಕ್‌ ಅವರ ತಂದೆ ಡಿ.ಟಿ.ಲಕ್ಷ್ಮಣ ಅವರೊಂದಿಗೆ ಆರ್.ಅಶೋಕ ಮಾತನಾಡಿ, ಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಇದಕ್ಕೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ, ಎಂಜಿನಿಯರಿಂಗ್‌ ವಿದ್ಯಾರ್ಥಿ ಭೂಮಿಕ್‌ ಮೃತಪಟ್ಟಿದ್ದರಿಂದ ಕುಟುಂಬದವರಿಗೆ ಬಹಳ ದುಃಖವಾಗಿದೆ. ಈ ಕುಟುಂಬದವರ ಜಮೀನಿನಲ್ಲಿ 30 ಜನರು ಕೆಲಸ ಮಾಡುತ್ತಿದ್ದಾರೆ. ಇವರ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ. ಆದರೆ, ಈಗ ಒಬ್ಬನೇ ಮಗ ಮೃತಪಟ್ಟಿದ್ದು, ಆ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆರ್‌ಸಿಬಿ ಸಂಭ್ರಮಾಚರಣೆಯನ್ನು ಎರಡು ಮೂರು ದಿನ ಮುಂದೂಡಿದ್ದರೆ ಯಾರಿಗೂ ಸಮಸ್ಯೆಯಾಗುತ್ತಿರಲಿಲ್ಲ ಎಂದು ಈ ಕುಟುಂಬ ಸೇರಿದಂತೆ ಎಲ್ಲರೂ ಹೇಳುತ್ತಿದ್ದಾರೆ. ಕ್ರಿಕೆಟ್‌ನ ಸಂಭ್ರಮಾಚರಣೆ ಜನರಿಗೆ ನೋವು ತಂದಿದೆ. ಈ ಸಾವುಗಳಿಗೆ ನ್ಯಾಯ ಸಿಗಬೇಕು ಎಂದರು.

ಇಂತಹ ಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು ಎಂದು ಭೂಮಿಕ್‌ ಅವರ ತಂದೆ ಹೇಳುತ್ತಿದ್ದಾರೆ. ಭೂಮಿಕ್‌ ಅವರ ತಂದೆ ಸಮಾಧಿಯ ಬಳಿಯೇ ದುಃಖದಿಂದ ಎರಡು ಮೂರು ದಿನ ಕಳೆದಿದ್ದಾರೆ. ಮುಂದೆ ಈ ರೀತಿಯ ಅನಾಹುತ ನಡೆಯಬಾರದು. ಕಾರ್ಯಕ್ರಮ ಮಾಡುವುದು ಬೇಡವೆಂದು ಪೊಲೀಸರು ಸೂಚನೆ ನೀಡಿದ್ದರೂ, ಅದನ್ನು ಪಾಲಿಸಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಸೂಕ್ತವಾದ ತನಿಖೆಗೆ ಒಳಪಡಬೇಕು. ನ್ಯಾಯ ಕೊಡಿಸಲು ನಾವೆಲ್ಲರೂ ಹೋರಾಟ ಮುಂದುವರಿಸುತ್ತೇವೆ ಎಂದರು.

ಮೃತ ಭೂಮಿಕ್‌ ತಂದೆ ಲಕ್ಷ್ಮಣ ಮಾತನಾಡಿ, ಇಷ್ಟು ಜನಸಂದಣಿ ಇರುವಾಗ ಇಂತಹ ಕಾರ್ಯಕ್ರಮ ಮಾಡಬಾರದು ಎಂದು ಸರ್ಕಾರಕ್ಕೆ ಯಾಕೆ ಗೊತ್ತಾಗಲಿಲ್ಲ? ನಮ್ಮಂತಹವರ ಮಕ್ಕಳ ಪ್ರಾಣ ಹೋಗಿದೆ. ಸರ್ಕಾರವೇನೋ ಪರಿಹಾರ ನೀಡಿದೆ. ಆದರೆ ಆ ಹಣ ನಮ್ಮನ್ನು ನೋಡಿಕೊಳ್ಳುತ್ತದೆಯೇ? ಎಂದು ಪ್ರಶ್ನೆ ಮಾಡಿದರು.

ಆರ್‌.ಅಶೋಕ ಸೇರಿದಂತೆ ಎಲ್ಲ ಮುಖಂಡರು ನಮಗೆ ಸಹಾಯ ಮಾಡಿದ್ದಾರೆ. ಎಲ್ಲ ತಂದೆ ತಾಯಿಗಳಿಗೆ ಇವರು ಸ್ಪಂದಿಸಿದ್ದಾರೆ. ಘಟನೆ ನಡೆದ ಕೂಡಲೇ ಅಗತ್ಯವಾದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದು ರಾಜಕೀಯವಲ್ಲ. ಮಾನವೀಯತೆ ದೃಷ್ಟಿಯಿಂದ ಇವರು ಸಹಾಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

Tags:
error: Content is protected !!