ದಾವಣಗೆರೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರೀಯ ಶಿಸ್ತು ಸಮಿತಿಯು ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ನೋಟಿಸ್ ನೀಡಿರುವುದಕ್ಕೆ ನನಗೆ ನೋವು ಇಲ್ಲ ಹಾಗೆಯೇ ಖುಷಿನೂ ಇಲ್ಲ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕತ್ವದ ವಿರೋಧಿ ಹೇಳಿಕೆಗಳು ಪಕ್ಷದ ವರ್ಚಸ್ಸಿಗೆ ಹಾನಿಮಾಡುತ್ತವೆ. ಇಂತಹ ಹೇಳಿಕೆ ನೀಡುವಲ್ಲಿ ಯತ್ನಾಳ್ ಟೀಮ್ ತೊಡಗಿದೆ. ತಾವು ಹಿರಿಯರು ಎನ್ನುವುದನ್ನು ಮರೆತು ವಿಜಯೇಂದ್ರ ಚಿಕ್ಕವರು ಎಂದು ನಿಂದಿಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ನಮ್ಮ ಮೇಲೆ ಹೊಂದಾಣಿಕೆ ರಾಜಕಾರಣದ ಆರೋಪ ಮಾಡುತ್ತಿದ್ದಾರೆ. ನನ್ನಿಂದಲೇ ಎಲ್ಲಾ ಎನ್ನುವ ಮನೋಭಾವ ಒಳ್ಳೆಯದಲ್ಲ. ಪಕ್ಷದ ಅಧ್ಯಕ್ಷರು ಚಿಕ್ಕವರೇ ಆಗಿದ್ದರೂ ರಾಜ್ಯ ರಾಜಕೀಯದ ಆಡಳಿತದಲ್ಲಿ ಮುಖ್ಯವಾಗುತ್ತಾರೆ. ಹಿರಿತನದ ಮೇಲೆ ಚಿಕ್ಕವರನ್ನು ನಿಂದಿಸಬಾರದು, ಕೇಂದ್ರದ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಧಾನಿ ಮೋದಿರನ್ನೂ ಭೇಟಿಯಾಗಿದ್ದರು. ಹಾಗಂತ ಅವರ ಮಧ್ಯೆ ಹೊಂದಾಣಿಕೆಯಿದೆ ಎಂದು ಹೇಳಿದರೆ ಹೇಗೆ? ರಾಜ್ಯದ ಅಭಿವೃದ್ದಿ ವಿಷಯವಾಗಿ ಚರ್ಚಿಸಿರಬಹುದು. ಏನೇ ಭಿನ್ನಮತ ಇದ್ದರೂ ಪಕ್ಷದ ಒಳಗೆ ಸರಿಪಡಿಸಿಕೊಂಡರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.