ಬೆಂಗಳೂರು: ಎನ್ ಡಿಎ ಕೂಟವೇ ನನ್ನ ಕುಟುಂಬ, ಮೈತ್ರಿಕೂಟದಿಂದಲೇ ಒಬ್ಬರು ಅಭ್ಯರ್ಥಿ ಆಗುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರಿಗೆ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಮ್ಮ ಕುಟುಂಬದಿಂದ ಅಭ್ಯರ್ಥಿ ಹಾಕುತ್ತೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು.
ಯೋಗೇಶ್ವರ್ ತಾವೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ ಎನ್ನುವ ಮತ್ತೊಂದು ಪ್ರಶ್ನೆಗೆ, ಎಲ್ಲವನ್ನೂ ಮೈತ್ರಿ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಜೆಡಿಎಸ್ ಬಿಜೆಪಿ ನಾಯಕರು ಸೇರಿ ನಿರ್ಧಾರ ಮಾಡುತ್ತೇವೆ. ಬಿಜೆಪಿ – ಜೆಡಿಎಸ್ ಎಲ್ಲ ನನ್ನ ಕುಟುಂಬವೇ. ಎನ್ ಡಿಎ ಅಭ್ಯರ್ಥಿ ಗೆಲ್ಲಬೇಕಷ್ಟೇ, ಇದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ಸಂಸದರ ಬಗ್ಗೆ ಸರ್ಕಾರದ ತಾರತಮ್ಯ
ರಾಜ್ಯದ ಜೆಡಿಎಸ್ ಸಂಸದರ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಜೆಡಿಎಸ್‌ನ ಎಂಪಿಗಳಿಗೆ ಇಲ್ಲಿವರೆಗೂ ಹೊಸ ಕಾರು ಕೊಟ್ಟಿಲ್ಲ ಎಂದು ದೂರಿದರು.
ರಾಜ್ಯದ ಎಲ್ಲಾ ಸಂಸದರಿಗೂ ಹೊಸ ಕಾರು ಕೊಡಲಾಗಿದೆ. ಆದರೆ, ನನಗೆ ಹಾಗೂ ಕೋಲಾರ ಸಂಸದ ಮಲ್ಲೇಶ್ ಬಾಬು ಅವರಿಗೆ ಮಾತ್ರ ಹೊಸ ಕಾರು ಭಾಗ್ಯ ಇಲ್ಲ. ಈ ರೀತಿ ರಾಜಕೀಯ ನಾನು ಮಾಡಿಲ್ಲ, ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.