ಬೆಂಗಳೂರು/ಮೈಸೂರು: ಮುಡಾ ಹಗರಣದಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದ್ದು, ಇದೀಗ ಉದ್ಯಮಿ ಜಯರಾಂ ಅವರ ನಿವಾಸ ವಕ್ರತುಂಡದಲ್ಲಿ ಸುಮಾರು 70 ಗಂಟೆಗಳ ಕಾಲ ವಿಚಾರಣೆ ನಡೆಸಿ, ಅನೇಕ ಬೇನಾಮಿ ಆಸ್ತಿ ಅಕ್ರಮವಾಗಿದೆ ಎಂದು ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಹಂಚಿಕೆ ಮಾಡಿರುವ ಮುಡಾ ನಿವೇಶನದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 2024ರ ಅಕ್ಟೋಬರ್ 29 ರಂದು ಉದ್ಯಮಿ ಜಯರಾಂ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ವೇಳೆ ಸುಮಾರು 300 ಕೋಟಿ ರೂ.ಮೌಲ್ಯದ ಬೇನಾಮಿ ಆಸ್ತಿಯೂ ಮುಡಾದಲ್ಲಿ ಹಗರಣವಾಗಿದೆ ಎಂದು ಇ.ಡಿ. ಸಂಸ್ಥೆಯೂ ತಿಳಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ.ಅಧಿಕಾರಿಗಳು ತನಿಖೆ ನಡೆಸುವ ವೇಳೆ ಉದ್ಯಮಿ ಜಯರಾಂ ಅವರ ನಿವಾಸದಲ್ಲಿ ಮುಡಾ ಹಗರಣದ ಮಹತ್ವದ ಡೈರಿ ಹಾಗೂ ವ್ಯಾಟ್ಸ್‌ಹ್ಯಾಪ್‌ನಲ್ಲಿ ಹಗರಣ ಬಯಲಾಗಿದ್ದು, ವಿವಿಧ ರಿಯಲ್ ಎಸ್ಟೇಟ್ ಉದ್ಯಮಿ, ಏಜೆಂಟ್ ಹಾಗೂ ರಾಜಕಾರಣಿಗಳ ಹೆಸರು ಉಲ್ಲೇಖವಾಗಿದೆ.
ಮುಡಾ ಹಗರಣದಲ್ಲಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡುವ ಸಲುವಾಗಿ ವಂಚಕರು ʼಕೋಕ್‌ನೆಟ್ʼ ಎಂಬ ಕೋಡ್‌ವರ್ಡ್ ಇಟ್ಟುಕೊಂಡು ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಈ ಮಾಹಿತಿಯೂ ಜಯರಾಂ ಅವರ ವಾಟ್ಸ್‌ಹ್ಯಾಪ್‌ನಿಂದ ತಿಳಿದು ಬಂದಿದೆ. ಅಲ್ಲದೇ ಇ.ಡಿ.ಅಧಿಕಾರಿಗಳಿಗೆ ಸಿಕ್ಕಿರುವ ಡೈರಿಯಲ್ಲಿ ಮಾಜಿ ಮುಡಾ ಆಯುಕ್ತರಾದ ತೇಜಸ್ ಗೌಡ ಹಾಗೂ ದಿನೇಶ್ ಅವರ ಹೆಸರನ್ನು ದಾಖಲಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.