Mysore
27
thunderstorm

Social Media

ಮಂಗಳವಾರ, 19 ಮೇ 2026
Light
Dark

ಪ್ರಶ್ನೆ ಪತ್ರಿಕೆ ಸೋರಿಕೆ | ನೀಟ್‌ ರದ್ದು, ವಿದ್ಯಾರ್ಥಿಗಳ ಆತಹತ್ಯೆಗೆ ಮೋದಿ ಕಾರಣ ; ಸಿಎಂ ಆರೋಪ

ತುಮಕೂರು : ನೀಟ್ ಪರೀಕ್ಷೆ ರದ್ದಾಗಿ 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಿ, ಹಲವು ವಿದ್ಯಾರ್ಥಿಗಳ ಆತಹತ್ಯೆಗೆ ಮೋದಿ ಸರ್ಕಾರವೇ ಕಾರಣ. ರಾಜ್ಯದ ಸಿಇಟಿ ಮಾದರಿಯಲ್ಲಿ ಪರೀಕ್ಷೆ ನಡೆಸಿ ಎನ್ನುವ ನಮ್ಮ ಸಲಹೆಯನ್ನು ತಿರಸ್ಕರಿಸಿ ನೀಟ್ ನಲ್ಲಿ ಅದ್ವಾನ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ, ಮೂರು ವರ್ಷಗಳ ಸಾಧನಾ ಸಮರ್ಪಣಾ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಅವರು ಮಾತನಾಡಿದರು.

ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಮೋದಿಯ ಅಚ್ಚೇ ದಿನ ಬರಲಿಲ್ಲ. ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಆತಹತ್ಯೆ ತಡೆಯದ ಮೋದಿ ಸರ್ಕಾರ, ರೈತರ ಆದಾಯವನ್ನೂ ದುಪ್ಪಟ್ಟು ಮಾಡಲಿಲ್ಲ. ಕಪ್ಪು ಹಣ ತರಲಿಲ್ಲ. ಹೀಗಾಗಿ ಬಿಜೆಪಿ-ಆರ್ ಎಸï ಎಸï ಸರ್ಕಾರ ಸಂಪೂರ್ಣ ವಿಫಲವಾಗಿ ದೇಶದ ಸಾಲವನ್ನು 220 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನವ ಕರ್ನಾಟಕ ಅಭಿವೃದ್ಧಿ ಮಾದರಿಯ ವಸ್ತು ಪ್ರದರ್ಶನ ಮತ್ತು ತುಮಕೂರು ಜಿಲ್ಲೆಯಲ್ಲಿ ನಡೆದಿರುವ 682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು.

ಎಲ್ಲಿದೆ ಗುಜರಾತ್ ಮಾದರಿ ?
ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತವರೂರು ಗುಜರಾತ್ ರಾಜ್ಯದ ಮಾದರಿಯನ್ನು ಟೀಕಿಸಿದ ಸಿದ್ದರಾಮಯ್ಯನವರು 35 ವರ್ಷಗಳಿಂದ ಗುಜರಾತ್ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ಅಭಿವೃದ್ಧಿಯೇ ಆಗಿಲ್ಲ. ಮೊನ್ನೆಯಷ್ಟೆ ಕೇವಲ 2500 ರೂ. ಮನೆ ಬಾಡಿಗೆ ಕಟ್ಟಲಾಗದ ಕಾರಣಕ್ಕೆ ಬಾಡಿಗೆಗಿದ್ದ ಬಡ ಕುಟುಂಬದ 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಇದು ನಿಜವಾದ ಗುಜರಾತ್ ಮಾದರಿ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು. ವಾಸ್ತವವಾಗಿ ಗುಜರಾತ್ ಮಾದರಿಯೇ ಒಂದು ಹಸಿ ಸುಳ್ಳು. ಇದನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಧಿಕಾರಕ್ಕೆ ಬಂದರು. ಆದರೆ ಅವರು ಮಾಡಿರುವ ಸಾಧನೆಯಾದರೂ ಏನು? ಎಂದು ಪ್ರಶ್ನಿಸಿದರು.

ಮೋದಿಯವರು ಪ್ರಧಾನಿ ಆಗುವ ಮೊದಲು ದೇಶದಲ್ಲಿ ಡೀಸೆಲ್, ಪೆಟ್ರೋಲ್, ಚಿನ್ನದ ಬೆಲೆ ಎಷ್ಟಿತ್ತು. ಈಗ ಅದು ಆಕಾಶಕ್ಕೆ ಏರಿದೆ. ಟ್ರಂಪ್ ಬಾಲ ಹಿಡಿದು ಸುತ್ತುತ್ತಿದ್ದ ಮೋದಿಯವರೇ ಈ ಬೆಲೆ ಏರಿಕೆಗೆ ಕಾರಣ. ಮೋದಿ ದರ್ಬಾರಿನಲ್ಲಿ ಅಂಬಾನಿ ಮತ್ತು ಅದಾನಿ ಮಾತ್ರ ಲಾಭ ಮಾಡಿಕೊಂಡು ಈಗ ಇವರ ಆಸ್ತಿ 8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಆದಾಯ ಮತ್ತು ಬದುಕು ನೆಲಕಚ್ಚಿದೆ ಎಂದು ಟೀಕಾಪ್ರಹಾರ ನಡೆಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣಬೈರೇಗೌಡ, ಈಶ್ವರಕಂಡ್ರೆ, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!