ಬೆಂಗಳೂರು: ಬಿಡದಿಯಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಿಗೆ ಅಲ್ಲಿ ಗ್ರೇಟರ್ ಬಿಡದಿ ಲೇಔಟ್ ಮಾಡಲು ನಿವೇಶನ ಮಾಡುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.8) ಎರಡನೇ ವಿಮಾನ ನಿಲ್ದಾಣಕ್ಕಾಗಿ ಕೇಂದ್ರ ಅಧ್ಯಯನ ತಂಡದ ಭೇಟಿ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಬಿಡದಿ ಸೂಕ್ತವಲ್ಲವೆಂದು ಈ ಹಿಂದೆ ಟಿಕ್ನಿಕಲ್ ವರದಿ ನೀಡಿದೆ. ಹಾಗಾಗಿ ಕನಕಪುರದ ಹಾರೋಹಳ್ಳಿ ಸಮೀಪದಲ್ಲಿ ಒಂದು ಸ್ಥಳ ನೋಡಲಾಗಿದೆ. ಅಲ್ಲದೇ ಕುಣಿಗಲ್ ರಸ್ತೆ ಬಳಿಯೂ ಒಂದು ಜಾಗ ನೋಡಿದ್ದೇವೆ. ಇವೆರಡೂ ವಿಧಾನಸೌಧದಿಂದ 50 ಕಿ.ಮೀ ದೂರ ಇವೆ ಎಂದರು.
ಟೆಕ್ನಿಕಲ್ ತಂಡದರು ಇಂದು ಮತ್ತು ನಾಳೆವರೆಗೂ ಜೊತೆಯಲ್ಲಿಯೇ ಇರುತ್ತಾರೆ. ಅವರೆಲ್ಲರೂ ಸ್ಥಳ ಪರಿಶೀಲನೆ ಮಾಡಿದ ಬಳಿಕ ದೆಹಲಿಗೆ ತೆರಳಿ ಆ ಸ್ಥಳಗಳ ಬಗ್ಗೆ ವರದಿ ನೀಡುತ್ತಾರೆ. ಇನ್ನೂ ದೆಹಲಿಯಿಂದ ನಮಗೆ ಸ್ಥಳ ವರದಿ ಬರಬೇಕು. ಆ ನಂತರ ನಾವು ಸಮಗ್ರ ಯೋಜನಾ ವರದಿ (DPR) ಮಾಡಬೇಕಾಗುತ್ತದೆ. ಅಲ್ಲದೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಯಾವ ಯಾವ ದೊಡ್ಡ ದೊಡ್ಡ ಕಂಪೆನಿಗಳು ಇವೆ ಎಂಬುದನ್ನು ನೋಡಬೇಕಾಗುತ್ತದೆ. ಇದಾದ ಮೇಲೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆದ ನಂತರ ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಿದರು.





