ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಗೆ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೂ ಮೊದಲೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ ವಿರುದ್ಧ ಕೊಲೆ ಬೆದರಿಕೆ, ಲಂಚ ಪಡೆದು ವಂಚಿಸಿರುವ ಗಂಭೀರ ಆರೋಪಗಳಿದ್ದರು, ಭ್ರಷ್ಟ ಕಾಂಗ್ರೆಸ್ ಸರ್ಕಾರ ಅವರ ರಕ್ಷಣೆಗೆ ನಿಂತಿದೆ. ಅಲ್ಲದೇ ಕಳಂಕಿತ ಸಚಿವರ ಬೆನ್ನಿಗೆ ನಿಂತಿರುವ ಸಿದ್ದರಾಮಯ್ಯ , ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರವಾಗಲಿ, ಸಾಕ್ಷ್ಯಗಳಾಗಲಿ ಇಲ್ಲ ಎಂದು ಸ್ವಯಂ ತನಿಖಾಧಿಕಾರಿಯಂತೆ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣ ಸಿಐಡಿ ತನಿಖೆಗೆ ವಹಿಸಿ ಇನ್ನೂ 2 ದಿನಗಳು ಕಳೆದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಐಡಿ ತನಿಖಾ ವರದಿ ಬರುವ ಮೊದಲೇ ಕ್ಲೀನ್ ಚಿಟ್ ನೀಡಿ ಜಡ್ಜ್ ಮೆಂಟ್ ಕೊಟ್ಟು ಬಿಟ್ಟಿದ್ದಾರೆ. ಈಗ ಸಿಐಡಿ ತನಿಖೆಯು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಕಿಡಿಕಾರಿದೆ.
ಲೂಟಿಕೋರ, ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಯುವ ಹಗರಣಗಳು ಮತ್ತು ಭ್ರಷ್ಟಾಚಾರಗಳಲ್ಲಿ ನ್ಯಾಯ ಎಂಬುದು ಕೇವಲ ಮರೀಚಿಕೆ. ಹೀಗಾಗಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದೆ.