Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕಲ್ಯಾಣ ಕರ್ನಾಟಕ | ಭೂಗರ್ಭ ಜಲಮಟ್ಟ ಹೆಚ್ಚಿಸುವ ಯೋಜನೆಗೆ ಚಿಂತನೆ: ಸಚಿವ ಎನ್ ಎಸ್ ಭೋಸರಾಜು

– ಸಣ್ಣ ನೀರಾವರಿ ಇಲಾಖೆ ಹಾಗೂ ಕೆಕೆಆರ್‌ಡಿಬಿ ಸಹಭಾಗಿತ್ವ
– ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ನೀರಿನ ಲಭ್ಯತೆಯನ್ನು ಸುಧಾರಿಸುವ ಗುರಿ

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ನೀರಿನ ಲಭ್ಯತೆಯನ್ನು ಸುಧಾರಿಸುವ ಉದ್ದೇಶದಿಂದ, ಸಣ್ಣ ನೀರಾವರಿ ಹಾಗೂ ಕೆಕೆಆರ್‌ಡಿಬಿ ಸಹಭಾಗಿತ್ವದಲ್ಲಿ ಶಿರಪುರ ಮಾದರಿ ಜಲ ಸಂರಕ್ಷಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.

ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರ ಗ್ರಾಮಕ್ಕೆ ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಸಚಿವರು ಭೇಟಿ ನೀಡಿ ಯೋಜನೆಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ:-ಚಾಮುಂಡಿ ಗುಡಿಯಲ್ಲಿಲ್ಲ, ಹೋರಾಡುವ ಮಹಿಳೆಯರಲ್ಲಿದ್ದಾಳೆ : ನಾಗಲಕ್ಷ್ಮಿ ಬಣ್ಣನೆ

ಶಿರಪುರ ಮಾದರಿ ಯೋಜನೆ (Shirapur Model – ಮಳೆ ನೀರಿನ ಸಂಗ್ರಹಣೆಯ ಮೂಲಕ ಭೂಗರ್ಭ ಜಲಮಟ್ಟ ಹೆಚ್ಚಿಸುವ ಮಾದರಿ) ಎಂಬುದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರ ಗ್ರಾಮದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಜಲ ಸಂರಕ್ಷಣೆ ಮತ್ತು ಮಳೆ ನೀರಿನ ಸಂಗ್ರಹಣೆಯ ಆಧಾರಿತ ಯೋಜನೆಯಾಗಿದೆ. ಇದರ ಉದ್ದೇಶ ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮತ್ತು ನೀರಿನ ಲಭ್ಯತೆಯನ್ನು ಸುಧಾರಿಸುವುದು. ಈ ಮಾದರಿ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರಿನ ಭದ್ರತೆ ಒದಗಿಸುವಲ್ಲಿ ಮಾದರಿಯಾಗಿದೆ. ಹಳ್ಳಗಳನ್ನು ಅಭಿವೃದ್ಧಿಪಡಿಸಿ ವೈಜ್ಞಾನಿಕವಾಗಿ ಸರಣಿ ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಮಳೆ ನೀರನ್ನು ಹರಿದು ಹೋಗದಂತೆ ತಡೆದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲ ಯಶಸ್ವಿಯಾಗಿದೆ. ಇದರಿಂದ ಬರಪೀಡಿತ ಶಿರುಪುರ ತಾಲ್ಲೂಕು ಇಂದು ಹಸಿರಿನಿಂದ ನಳನಳಿಸುತ್ತಿದೆ.

ಈ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶಿರಪುರ ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡಲಾಯಿತು. ಈ ವೇಳೆ, ಈ ಯೋಜನೆಯ ರೂವಾರಿಗಳಾದ ಮಹರಾಷ್ಟ್ರ ರಾಜ್ಯದ ಮಾಜಿ ಸಚಿವರು ಹಾಗೂ ಪ್ರಸ್ತುತ ವಿಧಾನಪರಿಷತ್ ಸದಸ್ಯರಾದ ಅಮರೀಶ್ ಬಾಯಿ ಪಟೇಲ್ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಈಗಾಗಲೇ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸುಮಾರು 16 ಗ್ರಾಮಗಳಲ್ಲಿ ಈ ಮಾದರಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. 56 ಕಿ.ಮೀ ಉದ್ದದ ನಾಲೆಗಳಲ್ಲಿ 52 ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇದೇ ಮಾದರಿಯನ್ನು ಕಲ್ಯಾಣ ಕರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಕರ್ನಾಟಕವನ್ನು ಜಲಸುಸ್ಥಿರ ರಾಜ್ಯವನ್ನಾಗಿ ರೂಪಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಹಾಗೂ ಕೆಕೆ ಅರ್‌ಡಿಬಿ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠನಗೊಳಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.

Tags:
error: Content is protected !!