Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಪತ್ರಿಕೋದ್ಯಮ ಅಂಬೇಡ್ಕರ್‌ ನುಡಿದಂತೆ ಇರಲಿ: ಕೆ.ವಿ ಪ್ರಭಾಕರ್‌ ಸಲಹೆ

ಬೆಂಗಳೂರು: ಪತ್ರಿಕೋದ್ಯಮ ಜನರ ಪ್ರಾಣವಾಯು ಎನ್ನುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತು ಮತ್ತು ಮೌಲ್ಯವನ್ನು ಕಾಪಾಡಲು ಮತ್ತು ವಿಸ್ತರಿಸಲು ಪೂರಕವಾದ ಕಾರ್ಯಕ್ರಮಗಳನ್ನು ಮಾಧ್ಯಮ ಅಕಾಡೆಮಿ ರೂಪಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಅಭಿನಂದಿಸಿ ಅವರು ಮಾತನಾಡಿದರು.

ಜನರ, ಸಮಾಜದ ಪ್ರಾಣವಾಯು ಆಗಿರುವ ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ನಮ್ಮ ಸಂವಿಧಾನ ಇದೆ. ನಮ್ಮ ಸಂವಿಧಾನ ಕತೃ ಆದ ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾ ವೃತ್ತಿ ನಿಜವಾದ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ನಮ್ಮ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಅಚ್ಚುಮೊಳೆ ಅವಧಿಯಿಂದ ಕೃತಕ ಬುದ್ದಿಮತ್ತೆವರೆಗೂ ಪತ್ರಿಕಾ ವೃತ್ತಿ ಬೆಳೆದಿದೆ. ತಂತ್ರಜ್ಞಾನದಲ್ಲಿ ನಮ್ಮ ವೃತ್ತಿ ಎಷ್ಟೇ ಮುಂದುವರೆದಿದ್ದರೂ ಸತ್ಯ ಮತ್ತು ನಿಷ್ಠುರ ಮೌಲ್ಯಗಳು ಮಾತ್ರ ಬದಲಾಗಬಾರದು. ಆದರೆ ಇಂದು ಊಹಾ ಪತ್ರಿಕೋದ್ಯಮ, ಕಾಲ್ಪನಿಕ ಪತ್ರಿಕೋದ್ಯಮ ಮತ್ತು ಸುಳ್ಳು ಸುದ್ದಿಗಳ ಹಾವಳಿ ಇಂದು ಹೆಚ್ಚಾಗಿದೆ. ಈ ವಿಚಾರದಲ್ಲಿ ನ್ಯೂಸ್ ರೂಮ್ ಗಳು ಬಹಳ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ಅಗತ್ಯವಿದೆ ಎಂದರು.

ಎರಡು ವರ್ಷಗಳಿಂದ ಪ್ರಶಸ್ತಿಗಳನ್ನು ನೀಡಿರಲಿಲ್ಲ. ನಮ್ಮ ಇಲಾಖೆಯ ನಾನಾ ವಿಭಾಗಗಳ ಪ್ರಶಸ್ತಿಗಳು ಐದು ವರ್ಷಗಳಿಂದ ಬಾಕಿ ಇದ್ದವು. ನಮ್ಮ ಅವಧಿಯಲ್ಲಿ ಎಲ್ಲವನ್ನೂ ವಿತರಿಸುವ ಕೆಲಸ ಮಾಡಿದ್ದೇವೆ ಎಂದರು.

ಪತ್ರಕರ್ತ ಕುಟುಂಬಗಳ ಆರೋಗ್ಯ, ಆರೋಗ್ಯ ವಿಮೆ, ಉಚಿತ ಬಸ್ ಪಾಸ್, ನಿವೃತ್ತಿ ವೇತನ ಹೆಚ್ಚಳ ಸೇರಿದಂತೆ ಹತ್ತಾರು ವರ್ಷಗಳಿಂದ ಬಾಕಿ ಇದ್ದ ನಮ್ಮ ಸಮುದಾಯದ ಬೇಡಿಕೆಗಳೆಲ್ಲವನ್ನೂ ಈಡೇರಿಸುತ್ತಿದ್ದೇವೆ ಎಂದು ವಿವರಿಸಿದರು.

Tags: