Mysore
23
overcast clouds

Social Media

ಶನಿವಾರ, 30 ಮೇ 2026
Light
Dark

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ ಏನಾಗುತ್ತಿದೆ? ತುಂಬಾ ಅಪಾಯದಲ್ಲಿರುವುದು ಗಾಂಧಿಜಿ ಅವರ ಪುಸ್ತಕವೂ ಅಲ್ಲ, ಗಾಂಧಿಜಿ ಅವರ ವಿಚಾರವೂ ಅಲ್ಲ. ಗಾಂಧಿಜಿ ಅವರ ಆತ್ಮಕತೆಯನ್ನು ದೇವಸ್ಥಾನದ ಲ್ಲಿಟ್ಟು ಪೂಜಿಸುವ ಕೆಲಸ ಆಗುತ್ತಿದೆ. ಹೇಗೆ ನಾವು ಬಸವಣ್ಣವರನ್ನು, ಇತರ ದೇವರುಗಳನ್ನು ಪೂಜಿಸುತ್ತಿದ್ದೇವೆಯೋ ಹಾಗೆ ಆಗುತ್ತಿದೆ.

ಗಾಂಧಿಜಿ ಶೂದ್ರತ್ವವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ಚರಕದಲ್ಲಿ ನೂಲು ತೆಗೆಯುತ್ತ ಕಾಯಕವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ರಾಜಕಾರಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದು ಗಾಂಧಿಜಿ ಹೇಳಿದರು. ಕಾರ್ಯಕರ್ತ ತನ್ನ ಸ್ವಂತ ದುಡಿಮೆ ಹಣದಿಂದ ರಾಜಕಾರಣ ಮಾಡಬೇಕು ಎಂದು ಹೇಳಿದ್ದರು ಮತ್ತು ಪಾಲಿಸಿದ್ದರು.

ಗಾಂಧಿಜಿ ಅವರ ಜೀವನ ಶೈಲಿಯನ್ನು, ಅವರ ಆರ್ಥಿಕ ಕಾರ್ಯಕ್ರಮಗಳನ್ನು, ಗ್ರಾಮೋದ್ಯೋಗ, ಗ್ರಾಮೋತ್ಪನ್ನ ಇವುಗಳನ್ನು ಎತ್ತಿಹಿಡಿಯದೇ ಸುಮ್ಮನೇ ಗಾಂಧಿ, ಗಾಂಧಿ ಎಂದು ಬಡಬಡಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಗಾಂಧಿಜಿ ಅವರ ಸಿಮೆಂಟಿನ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಯುವಕರು ಆ ಕಡೆ ಬರುವುದಿಲ್ಲ.

ಗಾಂಧಿಜಿ ಅವರು ಪ್ರತಿಪಾದಿಸಿದ ಆಚಾರ-ವಿಚಾರಗಳಲ್ಲಿ ಇವತ್ತು ಯುವಜನತೆಗೆ ಅಪಾರ ವಿಶ್ವಾಸವಿದೆ. ಇತ್ತೀಚೆಗೆ ಅಮೆರಿಕ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿಯಂತೂ ಗಾಂಧಿಜಿ ಅವರ ಸರಳ ಜೀವನ ಹೆಚ್ಚು ಪ್ರಸ್ತುತವಾಗುತ್ತಿದೆ. ತೈಲದ ಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಪಂಚದ ಎಲ್ಲ ದೇಶಗಳ ಯುವಕರು ಸರಳ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ.

ದುಂದುವೆಚ್ಚದತ್ತ ಗಮನಹರಿಸುತ್ತಿದ್ದ ಬಲಪಂಥೀಯರು ಕೂಡ ಇತ್ತೀಚೆಗೆ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.

-ಪ್ರಸನ್ನ ಹೆಗ್ಗೋಡು, ರಂಗಕರ್ಮಿ.

Tags:
error: Content is protected !!