ಗಾಂಧಿ ಅಭಿಯಾನ ಅರಿವಿನ ಯಾನ
ಗೊತ್ತಾಗಿದ್ದ ದಿನ ಬಂತು. ನನ್ನ ಆಗಿನ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಒಂದು ಕಡೆ ಸುಧಾರಣೆಯ ಮಾರ್ಗದ ಉತ್ಸಾಹ. ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡುವ ಒಂದು ನವೀನತೆ. ಮತ್ತೊಂದು ಕಡೆ ಕಳ್ಳನಂತೆ ಮುಚ್ಚುಮರೆಯಿಂದ ಕೆಲಸಮಾಡುವ ನಾಚಿಕೆ. ಇವುಗಳಲ್ಲಿ ಯಾವ ಭಾವ ಪ್ರಧಾನನಾಗಿತ್ತೆಂದು ಹೇಳುವುದು ಕಷ್ಟ. ಏಕಾಂತ ಸ್ಥಳವನ್ನು ಹುಡುಕಿಕೊಂಡು ನದಿಯ ತೀರಕ್ಕೆ ಹೋದೆವು. ಯಾರೂ ಕಾಣದ ದೂರವಾದ ಸ್ಥಳವನ್ನು ಹುಡುಕಿದೆವು. ಅಲ್ಲಿ ನನ್ನ ಬಾಳಿನಲ್ಲಿ ಮೊದಲ ಬಾರಿಗೆ ಬೇಯಿಸಿದ ಮಾಂಸ ವನ್ನು ನೋಡಿದೆ. ಜತೆಗೆ ರೊಟ್ಟಿ ಅಂಗಡಿಯ ರೊಟ್ಟಿಯೂ ಇತ್ತು. ನನಗೆ ಒಂದೂ ರುಚಿಸಲಿಲ್ಲ. ಆಡಿನ ಮಾಂಸ ಚಕ್ಕಳದಂತೆ ಇತ್ತು. ತಿನ್ನುವಂತೆಯೇ ಇರಲಿಲ್ಲ.ನನಗೆ ಜುಗುಪ್ಸೆಯಾಯಿತು.
ಆ ರಾತ್ರಿಯನ್ನು ಕಳೆಯುವುದು ನನಗೆ ಬಹಳ ಕಷ್ಟವಾಯಿತು. ಏನು ಮಾಡಿದರೂ ನಿದ್ರೆ ಬರಲಿಲ್ಲ. ಒಂದು ಜೀವಂತ ಆಡು ನನ್ನ ಹೊಟ್ಟೆಯನ್ನು ಹೊಕ್ಕು ಕಿರಿಚುತ್ತಿರುವಂತೆ ಅನುಭವವಾಗುತ್ತಿತ್ತು. ತಕ್ಷಣ ಪಶ್ಚಾತ್ತಾಪದಿಂದ ಮೇಲೇಳುತ್ತಿದ್ದೆ. ಕೂಡಲೇ ಮಾಂಸಾಹಾರ ಸೇವನೆ ಕರ್ತವ್ಯವೆಂದು, ಧೈರ್ಯವನ್ನು, ಸಮಾಧಾನವನ್ನೂ ತಂದು ಕೊಳ್ಳುತ್ತಿದ್ದೆ. ನನ್ನ ಸ್ನೇಹಿತ ಸುಲಭವಾಗಿ ಸೋಲುವವನಲ್ಲ. ಆಗ ಅವನು ಮಾಂಸವನ್ನು ವಿಧವಿಧವಾಗಿ ರುಚಿರುಚಿಯಾಗಿ ತಯಾರು ಮಾಡಿಸಲು ಪ್ರಾರಂಭಿಸಿದ. ಅದನ್ನು ತಿನ್ನಲುನದಿಯ ತೀರದ ಏಕಾಂತ ಸ್ಥಳಕ್ಕೆ ಹೋಗ ಬೇಕಾಗಿರಲಿಲ್ಲ. ಸರಕಾರಿ ಬಂಗಲೆಯ ಅಡುಗೆಯವನೊಂದಿಗೆ ನನ್ನ ಸ್ನೇಹಿತ ಏರ್ಪಾಡು ಮಾಡಿದ್ದ. ಸೊಗಸಾದ ಕುರ್ಚಿ ಮೇಜುಗಳ ಠೀವಿಯಿಂದ ನನ್ನನ್ನು ಆಕರ್ಷಿಸಿದ. ಈ ಬಲೆ, ಸಾರ್ಥಕವಾಯಿತು. ನನಗೆ ಆಡಿನ ಮೇಲಿದ ಕರುಣೆ ನಾಶವಾಯಿತು. ಮಾಂಸವಲ್ಲದಿದ್ದರೂ ಮಾಂಸದಿಂದ ಮಾಡಿದ ತಿಂಡಿಗಳ ರುಚಿ ಹತ್ತಿತ್ತು. ಹೀಗೆ ಒಂದು ವರುಷ ಕಳೆಯುವುದರೊಳಗೆ ನಾನು ಐದಾರು ಸಲ ಮಾಂಸದ ತಿಂಡಿಗಳನ್ನು ತಿಂದೆನು.
ಏಕೆಂದರೆ, ಸರಕಾರಿ ಬಂಗಲೆ ಯಾವಾಗಲೂ ಸಿಕ್ಕುತ್ತಿರಲಿಲ್ಲ ಮತ್ತು ರುಚಿರುಚಿಯಾದ ಮಾಂಸದ ಪದಾರ್ಥಗಳನ್ನು ಪದೇ ಪದೇ ಮಾಡಿಸಲು ಸಾಧ್ಯವಿರುತ್ತಿರಲಿಲ್ಲ. ಈ ಸುಧಾರಣೆಗೆ ನನ್ನಲ್ಲಿ ಹಣವಿಲ್ಲದಿದ್ದುದರಿಂದ, ವೆಚ್ಚವೆಲ್ಲ ಸ್ನೇಹಿತನ ಮೇಲೆಯೇ ಬೀಳುತ್ತಿತ್ತು. ಆತ ಹೇಗೆ ಹಣ ಒದಗಿಸುತ್ತಿದ್ದನೋ ಇಂದಿಗೂ ನನಗೆ ತಿಳಿಯದು. ನನ್ನನ್ನು ಮಾಂಸಾಹಾರಿಯಾಗಿ ಮಾಡ ಬೇಕೆಂಬುದು ಅವನ ಹಠ, ಆದುದ ರಿಂದ ಅವನೇ ಖರ್ಚಿಗೆಲ್ಲ ಹಣ ಒದಗಿಸುವ ಭಾರವನ್ನು ವಹಿಸುತ್ತಿದ್ದ. ಅವನೂ ಅಂತಹ ಧನಿಕನೇನೂ ಅಲ್ಲ. ಈ ಕಾರಣದಿಂದ ಈ ಭೋಜನ ಸಂದರ್ಭಗಳು ಅಗಾಗ ಮಾತ್ರ ನಡೆಯುತ್ತಿದ್ದವು.
ಈ ಕಳ್ಳತನದ ಊಟ ಮಾಡಿದ ದಿನ ನನಗೆ ಮನೆಯಲ್ಲಿ ಊಟ ಬೇಕಾಗುತ್ತಿರಲಿಲ್ಲ. ತಾಯಿ ಎಂದಿನಂತೆ ಊಟಕ್ಕೆ ಕರೆ ದಾಗ ಬೇಡ ಎನ್ನುತ್ತಿದ್ದೆ. ಆಕೆ ಕಾರಣವನ್ನು ಕೇಳಿದರೆ ‘ಹಸಿವಿಲ್ಲ, ತಿಂದ ಅನ್ನ ಜೀರ್ಣವಾಗಿಲ್ಲ’ ಎನ್ನುತ್ತಿದೆ. ಹೀಗೆ ಹೇಳು ವಾಗಲೆಲ್ಲಾ ನನಗೆ ತುಂಬಾ ಸಂಕಟವಾಗುತ್ತಿತ್ತು. ನಾನು ಸುಳ್ಳು ಹೇಳುತ್ತಿದ್ದೇನೆ, ಎಂಬುದು ನನಗೆ ತಿಳಿದಿದ್ದಿತು. ನಾನು ಮಾಂಸಾಹಾರಿಯಾದುದು, ನಮ್ಮ ತಂದೆತಾಯಿಗಳಿಗೆ ತಿಳಿದರೆ ಅವರು ಅತ್ಯಂತ ಸಂಕಟಪಡುವರೆಂದೂ, ವಜ್ರಾಫಾತ ಹೊಂದುವರೆಂದೂ ನನಗೆ ಗೊತ್ತಿತ್ತು.
ಅದು ನನ್ನ ಮನಸ್ಸನ್ನು ಯಾವಾಗಲೂ ಕೊರೆಯುತ್ತಿತ್ತು. ಆದುದರಿಂದ ನಾನು ಹೀಗೆ ಯೋಚಿಸಿದೆನು: ‘ಮಾಂಸವನ್ನು ತಿನ್ನುವುದು ಅವಶ್ಯ. ಇದನ್ನು ಪ್ರಚಾರ ಮಾಡಿ ಹಿಂದೂಸ್ಥಾನದಲ್ಲಿ ಈ ಸುಧಾರಣೆಮಾಡುವುದು ಅವಶ್ಯ. ಆದರೆ ತಂದೆತಾಯಿಗಳಿಗೆ ಮೋಸ ಮಾಡುವುದು, ಸುಳ್ಳು ಹೇಳುವುದು, ಮಾಂಸಾಹಾರವನ್ನು ಬಿಡುವುದಕ್ಕಿಂತ ಹೆಚ್ಚು ಅಪರಾಧ. ಆದುದರಿಂದ ಮಾತಾಪಿತೃಗಳು ಬದುಕಿರುವವರೆಗೆ ಮಾಂಸವನ್ನು ಮುಟ್ಟಬಾರದು. ಅವರು ಸತ್ತಮೇಲೆ ಸ್ವತಂತ್ರನಾದಾಗ, ನಾನು ಬಹಿರಂಗವಾಗಿಯೇ ಮಾಂಸ ತಿನ್ನುತ್ತೇನೆ. ಅಲ್ಲಿಯವರೆಗೆ ಮಾಂಸವನ್ನು ಮುಟ್ಟುವುದಿಲ್ಲ’ ಈ ನಿಶ್ಚಯವನ್ನು ನನ್ನ ಸ್ನೇಹಿತನಿಗೂ ತಿಳಿಸಿದೆ ಮತ್ತು ಅಂದಿನಿಂದಲೇ ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟೆ. ಅಂದಿನಿಂದ ಮತ್ತೆ ಮಾಂಸ ತಿನ್ನಲಿಲ್ಲ. ತಮ್ಮ ಮಕ್ಕಳಲ್ಲಿ ಇಬ್ಬರು ಮಾಂಸವನ್ನು ತಿಂದಿದ್ದರೆಂಬುದು ನಮ್ಮ ತಂದೆತಾಯಿಗಳಿಗೆ ಎಂದೂ ಗೊತ್ತಾಗಲೇ ಇಲ್ಲ.
ತಂದೆತಾಯಿಗಳಿಗೆ ಮೋಸ ಮಾಡದಿರಬೇಕೆಂದು ಮಾಂಸಾಹಾರವನ್ನು ಬಿಟ್ಟರೂ, ಆ ಮಿತ್ರನ ಗೆಳೆತನವನ್ನು ಬಿಡಲಿಲ್ಲ. ಅವನನ್ನು ಸುಧಾರಿಸಬೇಕೆಂಬ ಉತ್ಸಾಹದಲ್ಲಿ ನನಗೇ ಕೆಟ್ಟುದಾಗಿತ್ತು. ಆದರೆ ಇದರ ಅರಿವೇ ನನಗೆ ಇರಲಿಲ್ಲ. ಇಷ್ಟೆಲ್ಲ ಆದರೂ ಆ ಮಿತ್ರನ ಸಹವಾಸ ಬಹಳ ಅನಿಷ್ಟವಾದುದೆಂಬ ಜ್ಞಾನ ನನಗೆ ಬರಲೇ ಇಲ್ಲ. ಕೊನೆಗೂ ಹೊಳೆಯದ ಅವನ ಇನ್ನೂ ಕೆಲವು ದುಷ್ಕಾರ್ಯಗಳನ್ನು ನಾನು ಪ್ರತ್ಯಕ್ಷನಾಗಿ ನೋಡುವುದು ಬಾಕಿಯಿತ್ತು. ಆದರೆ ನಾನು ಈ ಅನುಭವಗಳನ್ನು ಸಮಯಾನುಕ್ರಮವಾಗಿ ವಿವರಿಸುತ್ತಿರುವುದರಿಂದ, ಅವನ್ನು ಮುಂದೆ ಹೇಳುತ್ತೇನೆ.
” ಹಿಂದೂಸ್ಥಾನದಲ್ಲಿ ಮಾಂಸಾಹಾರದ ಬಗ್ಗೆ ಪ್ರಚಾರ ಮಾಡಿ ಸುಧಾರಣೆ ಮಾಡುವುದು ಅವಶ್ಯ ಎಂದು ಯೋಚಿಸಿದ್ದ ಗಾಂಧಿ”




