ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಲೂಟಿಕೋರರು ದರೋಡೆಕೋರರಿಗೆ ಸ್ವರ್ಗವಾಗಿದೆ ಎಂದು ಜೆಡಿಎಸ್ ಶಾಸಕ ಶರವಣ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಲೂಟಿಕೋರರು, ದರೋಡೆ ಮಾಡೋರಿಗೆ ಸ್ವರ್ಗವಾಗಿದೆ. ಗೃಹ ಇಲಾಖೆ ಸತ್ತು ಹೋಗಿದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. 4-5 ದಿನಗಳಿಂದ ಬೀದರ್, ಮಂಗಳೂರು, ಮೈಸೂರು ಭಾಗದಲ್ಲಿ ದರೋಡೆ, ಲೂಟಿ ಕೇಸ್‌ಗಳು ಆಗಿವೆ. ಕರ್ನಾಟಕದಲ್ಲಿ ಜನರು ಸುರಕ್ಷಿತರಾಗಿಲ್ಲ. ಎಲ್ಲರೂ ಭಯಭೀತರಾಗಿದ್ದಾರೆ. ಗೃಹ ಸಚಿವರು ಮನೆ ಬಿಟ್ಟು ಹೊರಗೆ ಬಂದು ಪೊಲೀಸ್ ವ್ಯವಸ್ಥೆ ಬಿಗಿ ಮಾಡುತ್ತಿಲ್ಲ ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಮಾಡಿ ಜಪ, ಶಾಂತಿ ಎಂದು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಪವರ್ ಫೈಟ್ ಜೋರಾಗಿದೆ. ಇದರಲ್ಲಿ ಈ ಸರ್ಕಾರ ಮುಳುಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿಲ್ಲ. ಇವತ್ತು ಕ್ರೈಂ ಜಾಸ್ತಿ ಆಗೋಕೆ ಈ ಸರ್ಕಾರನೇ ಕಾರಣ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.