ದಾವಣಗೆರೆ: ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಯಾವುದೇ ನೇಮಕಾತಿಯೂ ನಡೆಯುತ್ತಿಲ್ಲ. ಇದು ಹೀಗೆ ಮುಂದುವರಿದರೆ ರಾಜ್ಯಕ್ಕೆ ನೇಪಾಳದಲ್ಲಾದ ಸ್ಥಿತಿ ಆಗುತ್ತದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಪೊಲೀಸ್ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ. ಇಂದು ಧಾರವಾಡದಲ್ಲಿ ಪೊಲೀಸ್ ನೇಮಕಾತಿಗಾಗಿ 16 ಸಾವಿರಕ್ಕೂ ಹೆಚ್ಚು ಯುವಕರು ಸೇರಿದ್ದಾರೆ. ನಾನು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದೆ.
ಇದನ್ನು ಓದಿ : ನೇಪಾಳದ ಪರಿಸ್ಥಿತಿ ರಾಜ್ಯಕ್ಕೂ ಬರಲಿದೆ : ಯತ್ನಾಳ್ ಭವಿಷ್ಯ
ಸದನದಲ್ಲಿಯೂ ಕೂಡ ಕೇಳಿಕೊಂಡೆ. ಪೊಲೀಸ್ ನೇಮಕಾತಿಯಲ್ಲಿ ವಯಸ್ಸಿನ ಮಿತಿ ಸ್ವಲ್ಪ ಸಡಿಲಗೊಳಿಸಿ. ಈಗಾಗಲೇ ನೇಮಕಾತಿಗಾಗಿ ಕಾದು ಕಾದು ಹಲವರ ವಯಸ್ಸಿನ ಮಿತಿ ಕಳೆದಿದೆ. ಅವರು ಏನು ಮಾಡಬೇಕು. ಸರ್ಕಾರದ ತಪ್ಪಿಗೆ ಅಭ್ಯರ್ಥಿಗಳಿಗೆ ಶಿಕ್ಷೆಯಾಗುತ್ತಿದೆ. ಯಾವೊಂದು ಇಲಾಖೆಯ ನೇಮಕಾತಿಯನ್ನು ಸರ್ಕಾರ ಮಾಡುತ್ತಿಲ್ಲ. ಉದ್ಯೋಗಕ್ಕಾಗಿ ಅಲೆದು ಅಲೆದು ಯುವಕರು ರೋಸಿಹೋಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಉಚಿತ ಅಕ್ಕಿ ಅನ್ನತಿಂದು, ಬಸ್‌ನಲ್ಲಿ ಓಡಾಡಿಕೊಂಡು ಇರಬೇಕಾ? ಕೆಲಸಕ್ಕಾಗಿ ಹೀಗೆ ಅಡ್ಡಾಡುತ್ತಾ ಇದ್ದರೆ ಸಾಕಾ? ಈ ರೀತಿ ಇದ್ದರೆ ರಾಜ್ಯದಲ್ಲಿ ನೇಪಾಳದಲ್ಲಿ ಆದ ಸ್ಥಿತಿ ಬರುತ್ತದೆ. ಇದೇ ರೀತಿ ಆಗುವ ಮೊದಲು ಸರ್ಕಾರ ಎಚ್ಚರ ವಹಿಸಲು ಎಂದರು.





