Mysore
29
few clouds

Social Media

ಮಂಗಳವಾರ, 26 ಮೇ 2026
Light
Dark

ಅಕಾಲಿಕ ಮಳೆ; ೮ ಲಕ್ಷ ರೂ. ಮೌಲ್ಯದ ರಾಗಿ ನಾಶ

ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು

ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಕಣದಲ್ಲಿ ಒಕ್ಕಣೆಗೆ ಹಾಕಿದ್ದ ೧೦ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ಸಂಪೂರ್ಣವಾಗಿ ಹಾಳಾಗಿದ್ದು, ಅಂದಾಜು ೮ ಲಕ್ಷ ರೂ. ನಷ್ಟವಾಗಿದೆ.

ರೈತರು ರಾಗಿ ಬೆಳೆಯನ್ನು ಕಣದಲ್ಲಿ ಒಕ್ಕಣೆಗೆ ಹಾಕಿದ್ದು, ಅವಳಿ ತಾಲ್ಲೂಕುಗಳ ಕೆಲವೆಡೆ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿದೆ.

ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಸಮೀಪದ ಕಾವಲು ಹೊಸೂರು ಗ್ರಾಮದ ರೈತರು ರಾಗಿಯನ್ನು ಕಣದಲ್ಲಿ ಒಕ್ಕಣೆ ಮಾಡಿದ್ದರು. ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ರೈತರು ರಾಗಿ ಬೆಳೆಯನ್ನು ಮೆದೆ ಹಾಕಿರುತ್ತಾರೆ. ಮಳೆಗಾಲ ನಿಂತ ಮೇಲೆ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಜಮೀನಿನಲ್ಲಿ ಕಣ ಮಾಡಿಕೊಂಡು ರಾಗಿ ಒಕ್ಕಣೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಅಕಾಲಿಕ ಮಳೆ ಸುರಿದಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅದೇ ರೀತಿ ಕಾವಲು ಹೊಸೂರು ಗ್ರಾಮದ ಹುಚ್ಚೇಗೌಡ, ರಾಮೇಗೌಡ, ಸಣ್ಣಸ್ವಾಮಿ, ಕೆಂಪಮ್ಮ, ಕೃಷ್ಣೇಗೌಡ, ಕುಮಾರ್ ಸೇರಿದಂತೆ ಹಲವು ರೈತ ಕುಟುಂಬಗಳವರು ಸುಮಾರು ೧೦ ಎಕರೆಯಲ್ಲಿ ರಾಗಿ ಬೆಳೆ ಬೆಳೆದು, ರಾಗಿ ಹುಲ್ಲನ್ನು ಕಣದಲ್ಲಿ ಹರಡಿದ್ದರು. ಆದರೆ ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆ ಕಣದಲ್ಲಿದ್ದ ರಾಗಿ ಮತ್ತು ಹುಲ್ಲನ್ನು ಕೊಚ್ಚಿಕೊಂಡು ಹೋಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಶಾಸಕ ರವಿಶಂಕರ್ ಹಾಗೂ ತಹಸಿಲ್ದಾರ್ ಅವರು ಅಕಾಲಿಕ ಮಳೆಯಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳ ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಂಪೆರೆದ ಮಳೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನ ಝಳದಿಂದ ಬಸವಳಿದಿದ್ದ ಜನರಿಗೆ ಹಾಗೂ ಭೂಮಿಗೆ ಮಳೆ ತಂಪೆರೆದಿದೆ. ಕೆ.ಆರ್.ನಗರ ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದರೆ, ಸಾಲಿಗ್ರಾಮ ತಾಲ್ಲೂಕಿನ ವಿವಿಧೆಡೆಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಮಳೆ ಸುರಿದಿದೆ.

 

 

Tags:
error: Content is protected !!