ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ. ಕೆಲವರು ಹೇಳುವಂತೆ, ಇದಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊರತೆ. ಮತ್ತೆ ಕೆಲವರು ಈ ಕಟ್ಟಡವು ಮೈಸೂರು ನಗರ ಪಾಲಿಕೆಯ ಕಟ್ಟಡವಾಗಿದ್ದು, ಇದನ್ನು ಮೈಸೂರು ನಗರ ಪಾಲಿಕೆಯು ಇದುವರೆಗೂ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡದ ಕಾರಣ, ಸದ್ಯಕ್ಕೆ ಬೀಗ ಹಾಕಲಾಗಿದೆ ಎನ್ನುತ್ತಿದ್ದಾರೆ.
ಕಾರಣ ಏನೇ ಇರಲಿ, ಇದರಿಂದ ಈ ಭಾಗದ ಸಾರ್ವಜನಿಕರಿಗೆ ಅದರಲ್ಲೂ ಅನಾರೋಗ್ಯಕ್ಕೆ ತುತ್ತಾದ ಹಿರಿಯ ನಾಗರಿಕರು, ಮತ್ತು ಮಹಿಳೆಯರಿಗೆ ತೀವ್ರ ಅನನುಕೂಲವಾಗಿದೆ. ಅನಾರೋಗ್ಯಕ್ಕೆ ತುತ್ತಾದವರು ಪಕ್ಕದ, ಜಯನಗರದ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಆಸ್ಪತ್ರೆಯ ಆವರಣ ಈಗ ದನ – ಕರುಗಳು, ನಾಯಿಗಳ ತಂಗುದಾಣವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತು ಗಮನ ಹರಿಸಿ, ಕೂಡಲೇ ಈ ಆರೋಗ್ಯ ಕೇಂದ್ರವನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು




