ಬೆಂಗಳೂರು : ಇಷ್ಟು ವರ್ಷ ನಾಪತ್ತೆ ಆಗಿದ್ದ ನಟ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಅವರು ಈಗ ಮರಳಿ ಬಂದಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಅಂದು ನಡೆದ ಘಟನೆ ವಿವರಿಸಿದ್ದಾರೆ. ಈ ವೇಳೆ ಅವರು ಇಷ್ಟು ವರ್ಷಗಳ ಕಾಲ ಎಲ್ಲಿದ್ದರು ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ, ಎಲ್ಲವನ್ನೂ ಬಿಟ್ಟು ಹೋಗುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಅವರು ಬಹಿರಂಗಗೊಳಿಸಿದ್ದಾರೆ.
‘ನನ್ನಿಂದ ಎಷ್ಟೋ ಜನಕ್ಕೆ ತೊಂದರೆ ಆಗಿದೆ, ನೋವಾಗಿದೆ. ಅವರೆಲ್ಲರಿಗೂ ಕ್ಷಮೆ ಕೇಳುತ್ತೇನೆ’ ಎಂದು ಮಾತು ಆರಂಭಿಸಿದರು. ‘ಇಂಜಿನಿಯರಿಂಗ್ ಮುಗಿಸಿ, ಸಹಾಯಕ ನಿರ್ದೇಶಕ ಆದ ನಂತರ ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ಮೊದಲ ಸಲ ಸಿನಿಮಾ ಮಾಡಿದಾಗ ಅಂದುಕೊಂಡ ರೀತಿಯಲ್ಲಿ ಕೈ ಹಿಡಿಯಲಿಲ್ಲ. ಸಿನಿಮಾ ನಿರ್ಮಾಣ ಮಾಡಿದೆ, ಡಿಸ್ಟ್ರಿಬ್ಯೂಷನ್ ಮಾಡಿದೆ, ಹೋಟೆಲ್ ಉದ್ಯಮ ಮಾಡಿದೆ. ಯಾವುದೂ ಕೈ ಹಿಡಿಯಲಿಲ್ಲ’ ಎಂದು ಮಲ್ಲಿಕಾರ್ಜುನ ಹೇಳಿದರು.
ನಂತರ ಹಲವು ವಿಷಯದಲ್ಲಿ ಕೈ ಸುಟ್ಟುಕೊಂಡೆ, ಮೈತುಂಬ ಸಾಲ ಮಾಡಿಕೊಂಡಿದ್ದೆ. ನಂತರ ಸಾಯುವ ನಿರ್ಧಾರಕ್ಕೂ ಬಂದಿದ್ದೆ, ಆದರೆ, ಸಾಯುವ ನಿರ್ಧಾರದಿಂದ ಹಿಂದೆ ಸರಿದೆ.. ‘ಅಂದು ಕುಂದಾಪರದಿಂದ ಹೊರಟೆ. ಸವದತ್ತಿಗೆ ಬಂದೆ. ನನ್ನ ಗೆಳೆಯನ ಬಳಿ ಹಣ ಪಡೆದೆ. ಕೊಲ್ಲಾಪುರ, ಸೊಲ್ಲಾಪುರ, ಉತ್ತರ ಭಾರತ ಸೇರಿದಂತೆ ಅನೇಕ ಕಡೆ ಸುತ್ತಾಡಿದೆ. ಹಲವು ಜಾಗದಲ್ಲಿ ಕೆಲವು ದಿನ ಇರುತ್ತಿದ್ದೆ, ಬಿಟ್ಟು ಹೋಗ್ತಿದ್ದೆ. ಹೋಟೆಲ್, ರೆಸಾರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲಸ ಮಾಡಿದೆ’ ಎಂದು ಅವರು ಹೇಳಿದ್ದಾರೆ.
‘ನನಗೆ ನೇಪಾಳದಲ್ಲಿ ಒಬ್ಬ ಗೆಳೆಯನಿದ್ದ. ಅವನ ಹೋಟೆಲ್ ಇತ್ತು. ಅಲ್ಲಿ ಸಾಕಷ್ಟು ಸಮಯ ಕಳೆದೆ. ನಾನು ಬದುಕಿದ್ದೀನಿ ಅಂತ ಪತ್ನಿಗೆ ಪತ್ರ ಬರೆದೆ. ತಾಯಿಗೂ ಬರೆದೆ. ದಿನಕರ್ ಅವರನ್ನು ಕಳೆದ ವರ್ಷ ಭೇಟಿ ಮಾಡಿದೆ. ದರ್ಶನ್‌ರನ್ನು ಭೇಟಿ ಮಾಡಬೇಕಿತ್ತು. ಆಗ ನನಗೆ ಪ್ಯಾರಲಿಸಿಸ್ ಆಯ್ತು. 7 ತಿಂಗಳು ಬೆಡ್ ರೆಸ್ಟ್ ಮಾಡಬೇಕಾಯಿತು. ಮತ್ತೆ ರೆಡಿ ಆದೆ. ಒಂದೂವರೆ ತಿಂಗಳ ಹಿಂದೆ ಬಂದು ಸಾಲ ಕೊಟ್ಟ ಎಲ್ಲರನ್ನೂ ಕೇಳಿಕೊಂಡಿದ್ದೇನೆ. ಸೋತಿದ್ದೇನೆ, ಸತ್ತಿಲ್ಲ ಎಂದು ಹೇಳಿದೆ. ಎಲ್ಲರೂ ಪಾಸಿಟಿವ್ ಆಗಿ ಮಾತನಾಡಿ ಧೈರ್ಯ ಹೇಳಿದ್ದಾರೆ’ ಎಂದು ಅವರು ವಿವರಿಸಿದರು.
ಸಾಲ ಮಾಡಿಕೊಂಡಾಗ ದರ್ಶನ್ ಬಳಿ 1 ಕೋಟಿ ರೂಪಾಯಿ ಸಹಾಯ ಕೇಳಿದೆ. ಅವರು ಕೊಟ್ಟರು. ಮತ್ತೆ ಕೇಳೋಕೆ ಮನಸ್ಸು ಬರಲಿಲ್ಲ. ನಾನು ಎಲ್ಲಿದ್ದೇನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ತುಗೂದೀಪ ಪ್ರೊಡಕ್ಷನ್ಸ್ ಚೆನ್ನಾಗಿ ನೋಡಿಕೊಂಡಿದೆ. ನಾನು ಅವರಿಗೆ ಮೋಸ ಮಾಡಿಲ್ಲ. ದರ್ಶನ್ ಬಳಿ ಕಷ್ಟ ಎಂದು ಹಣ ತೆಗೆದುಕೊಂಡಿದ್ದು ಅಷ್ಟೇ ಹೊರತು, ಮತ್ತೆ ಯಾವಾಗಲೂ ಹಣ ಮಾಡಿಲ್ಲ ಎಂದಿದ್ದಾರೆ ಅವರು.
ದರ್ಶನ್ ಅವರಿಗೆ ನಾನು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿತ್ತು. ಎಷ್ಟು ಸಾಲ ಮಾಡಿದ್ದೇನೆ ಅನ್ನೋದು ಗೊತ್ತಿರಲಿಲ್ಲ. ಅವರನ್ನು ಫೇಸ್ ಮಾಡೋಕೆ ಆಗಲ್ಲ ಅನ್ನೋದು ಗೊತ್ತಾಯ್ತು. ಅವರ ಮೇಲಿನ ಅಪಾರ ಗೌರವ ಊರನ್ನು ಬಿಡುವಂತೆ ಮಾಡಿತು ಎಂದಿದ್ದಾರೆ.





