ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಕರಾವಳಿ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಸೀಮಿತವಾಗಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆಯನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಂದು ಲೋಕಾರ್ಪಣೆ ಮಾಡಿದರು.
ಶಾಂತಿಯ ಸಂಕೇತವಾದ ಪಾರಿವಾಳದ ಚಿಹ್ನೆಯನ್ನೊಳಗೊಂಡ ವಿಶೇಷ ಕಾರ್ಯಪಡೆ ಲಾಂಛನವನ್ನು ಹಾಗೂ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಇದೇ ವೇಳೆ ಮಾತನಾಡಿದ ಪರಮೇಶ್ವರ್ ಅವರು, ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕೊಲೆಯಾಗಿತ್ತು. ಸ್ವಾಭಾವಿಕವಾಗಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಶಾಂತಿ ಸಹಬಾಳ್ವೆಯ ಪರಿಸ್ಥಿತಿಯನ್ನು ನಾನು ನೋಡಲೇ ಇಲ್ಲ. ರಾಜ್ಯದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿದಿದ್ದರೆ ಅದಕ್ಕೆ ಕರಾವಳಿ ಜಿಲ್ಲೆಗಳ ಕೊಡುಗೆ ಅಪಾರವಾಗಿದೆ. ಇಲ್ಲಿನ ಕಾರ್ಯವೈಖರಿಯೇ ವಿಶೇಷವಾಗಿದೆ. ರಾಜ್ಯದಲ್ಲೇ ಮೊದಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮಂಗಳೂರಿನಲ್ಲಿ ಆರಂಭಿಸಲಾಗಿತ್ತು. ನಾಡಿನ ಅಭಿವೃದ್ಧಿಯಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದರು.
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ದಾಖಲಿಸಲು ಪ್ರತಿ ಠಾಣೆಯಲ್ಲೂ ಅವಕಾಶ ಮಾಡಿಕೊಟ್ಟಿರುವುದರಿಂದಾಗಿ ಸಂಖ್ಯೆ ಹೆಚ್ಚಾಗಿದೆ ಎನಿಸುತ್ತಿದೆ. ಸೈಬರ್ ಅಪರಾಧಗಳ ನಿಗ್ರಹಕ್ಕೆ ಪ್ರತಿಯೊಬ್ಬ ಕಾನ್‍ಸ್ಟೇಬಲ್‍ಗೂ ತರಬೇತಿ ನೀಡಲಾಗುವುದು. ಇದಕ್ಕಾಗಿ ಜಿಲ್ಲಾ ಪೊಲೀಸ್ ಕಚೇರಿಗಳಲ್ಲಿ ತರಬೇತಿ ಘಟಕ ಆರಂಭಿಸುವುದಾಗಿ ತಿಳಿಸಿದರು.