ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕೊಡುಗೆ ಏನು ಎಂದು ಮೊದಲು ಹೇಳಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಎಂಬ ಸೀತಾರಾಮನ್ ಹೇಳಿಕೆಗೆ ಕಿಡಿಕಾರಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ದೇಶದ ಹಣಕಾಸು ಸಚಿವೆ. ಅವರ ಬಗ್ಗೆ ನಮಗೆ ಗೌರವ ಇದೆ. ನಮ್ಮ ರಾಜ್ಯದ ಹಣಕಾಸು ಬಗ್ಗೆ ಮಾತನಾಡುವ ಮೊದಲು ಅವರು ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಮೊದಲು ಹೇಳಲಿ? ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಕರ್ನಾಟಕದಿಂದ ಹೋಗಿ ಕರ್ನಾಟಕದ ಹಿತ ಕಾಪಾಡಲು ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಜೆಟ್‌ನಲ್ಲಿ ತಮಿಳುನಾಡಿಗಿಂತ ಕರ್ನಾಟಕಕ್ಕೆ ಕಡಿಮೆ ಹಣ ಕೊಟ್ಟಿರುವುದಕ್ಕೆ ನಮಗೆ ನಾಚಿಕೆ ಆಗುತ್ತಿದೆ ಎಂದು ಕೇಂದ್ರ ಬಜೆಟ್ ವಿರುದ್ಧ ಕಿಡಿಕಾರಿದರು.