ಬೆಂಗಳೂರು: ಭಾರೀ ಮಳೆಗೆ ಹಿಮಾಚಲ ಪ್ರದೇಶ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ರಾಜ್ಯ ಸರ್ಕಾರದಿಂದ 5 ಕೋಟಿ ನೆರವು ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ ಅಮೂಲ್ಯ ಜೀವಗಳು ಬಲಿಯಾಗಿವೆ. ಸಾವಿರಾರು ಮನೆಗಳು ಕೊಚ್ಚಿಹೋಗಿವೆ. ಮೂಲಸೌಕರ್ಯಗಳು ನಾಶವಾಗಿವೆ. ಇದಕ್ಕೆ ಕರ್ನಾಟಕದ ಜನರು ತೀವ್ರ ಸಂತಾಪ ಸೂಚಿಸುತ್ತಾರೆ.
ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಾಗ, ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಒಗ್ಗಟ್ಟಾಗಿ ಇದನ್ನು ಎದುರಿಸಬೇಕು. ಹೀಗಾಗಿ ಕರ್ನಾಟಕವು ಹಿಮಾಚಲ ಪ್ರದೇಶದ ಜನರ ಜೊತೆ ಹೆಗಲಿಗೆ ಹೆಗಲಾಗಿ ನಿಲ್ಲುತ್ತದೆ. ನಿಮ್ಮ ಕಷ್ಟಕಾಲದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ನವರಾತ್ರಿಗೆ ಒಂದು ದಿನ ಮೊದಲು ಜಿಎಸ್‌ಟಿ ಕಡಿತ: ಪ್ರಧಾನಿ ನರೇಂದ್ರ ಮೋದಿ
ಈ ಹಿನ್ನೆಲೆಯಲ್ಲಿ ವಿಪತ್ತಿಗೀಡಾದ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಸರ್ಕಾರದಿಂದ 5 ಕೋಟಿ ರೂ ಹಣವನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಇನ್ನು ಹಿಮಾಚಲ ಪ್ರದೇಶಕ್ಕೆ 5 ಕೋಟಿ ನೆರವು ನೀಡುವ ಬಗ್ಗೆ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಕಿಡಿಕಾರಿವೆ. ಈ ಬಗ್ಗೆ ಮಾತನಾಡಿರುವ ಶಾಸಕ ಅಶ್ವಥ್ ನಾರಾಯಣ್ ಅವರು, ಹಾಸನದಲ್ಲಿ ಗಣೇಶನ ಮೆರವಣಿಗೆಯಲ್ಲಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ರಸ್ತೆಗಳು ಸುರಕ್ಷತೆ ಇಲ್ಲ. ಮೆರವಣಿಗೆ ನಡೆಯುವಾಗ ಹೇಗೆ ಅಷ್ಟು ವೇಗವಾಗಿ ಚಾಲಕ ವಾಹನ ಚಲಾಯಿಸುತ್ತಿದ್ದ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ವಯನಾಡಿನವರು, ಹಿಮಾಚಲ ಪ್ರದೇಶದವರು ಎಂದುಕೊಂಡು ಹಾಸನದವರಿಗೂ ಹೆಚ್ಚಿನ ಪರಿಹಾರ ನೀಡಿ ಎಂದು ಆಗ್ರಹಿಸಿದರು.





