Mysore
20
broken clouds

Social Media

ಮಂಗಳವಾರ, 10 ಫೆಬ್ರವರಿ 2026
Light
Dark

ಹೈಕಮಾಂಡ್‌ ನನ್ನ ಪರವಾಗಿದೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಎರಡುವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಹೈಕಮಾಂಡ್ ನನ್ನ ಪರವಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳುವ ಮೂಲಕ ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಸಂದೇಶ ರವಾನಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ಧಿಯ ಕುರಿತ ಚರ್ಚೆಗೆ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರ ನೀಡುವಾಗ ಕರ್ಮ ಸಿದ್ಧಾಂತದ ಬಗ್ಗೆ ಪ್ರಸ್ತಾಪ ಮಾಡಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯ ಪ್ರವೇಶಿಸಿ, ನಾವೆಲ್ಲಾ ಬ್ರಹ್ಮನ ಬಳಿ ಹೆಚ್ಚು ಹೊತ್ತು ಇರದೇ ಬಂದು ಬಿಟ್ಟಿದ್ದೇವೆ. ಆದರೆ ಸಿದ್ದರಾಮಯ್ಯ ಅವರು ಬ್ರಹ್ಮನ ಬಳಿ ಕುಳಿತುಕೊಂಡು 2013 ರಿಂದ 2018 ರವರೆಗೂ 5 ವರ್ಷ ಮುಖ್ಯಮಂತ್ರಿ ಎಂದು ಖಚಿತವಾಗಿ ಬರೆಸಿಕೊಂಡು ಬಂದಿದ್ದರು. ಈಗ ಎರಡೂವರೆ ವರ್ಷ ಮಾತ್ರ ಎಂದು ಬರೆಯಲಾಗಿದೆ ಎಂದು ಕೆಣಕಿದರು.

ಇದು ನಿಮಗೆ ಹೇಗೆ ಗೊತ್ತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ನೀವು ಅಧಿಕಾರ ಹಂಚಿಕೆಗೆ ಕುರಿತಂತೆ ಹೊಸದಿಲ್ಲಿ ವಿಮಾನ ಹತ್ತುವಾಗಿನಿಂದಲೂ ಹಿಡಿದು ತೀರ್ಮಾನವಾಗುವವರೆಗೂ ಪ್ರತಿ ಎರಡು ಗಂಟೆಗೆ ಒಮ್ಮೆ ನನಗೆ ಫೋನ್ ಕರೆಯ ಮೂಲಕ ಮಾಹಿತಿ ಬರುತ್ತಿತ್ತು. ನಿಮಗೆ ಎರಡೂವರೆ ವರ್ಷ ಎಂದು ಗಡುವು ಬರೆದಿದ್ದಾರೆ. ಅದನ್ನು ಸರಿ ಮಾಡಿಕೊಳ್ಳಿ ಎಂದು ಹೇಳಿದರು.

ಇದನ್ನು ಓದಿ: ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ ನಮ್ಮದು ಹೈಕಮಾಂಡ್ ಪಾರ್ಟಿ. ಮೊದಲ ಅವಧಿಗೆ ೫ ವರ್ಷ ಮುಖ್ಯಮಂತ್ರಿ ಆಗಿ ಅಧಿಕಾರ ಪೂರೈಸಿದ್ದೇನೆ. ಈಗ ಹೈಕಮಾಂಡ್ ನನ್ನ ಪರವಾಗಿದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ನಿಮ್ಮ ಸಮರ್ಥನೆಯನ್ನು ಮೆಚ್ಚಬೇಕು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್ ಮತ್ತಿತರರು ಕಟಕಿಯಾಡಿದರು.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದೇಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಶೋಕ್ ಅವರಿಗೆ ವಿರೋಧ ಪಕ್ಷದ ನಾಯಕನಾಗಿ ಐದು ವರ್ಷ ಪೂರ್ಣಗೊಳಿಸುವ ವಿಶ್ವಾಸ ಇದೆಯೇ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ನಮಲ್ಲಿ ಅಶೋಕ್ ಐದು ವರ್ಷ ವಿರೋಧ ಪಕ್ಷದ ನಾಯಕರಾಗಿ ಇರುತ್ತಾರೆ. ನಮಗೆ ಆ ಬಗ್ಗೆ ಖಚಿತತೆ ಇದೆ. ನೀವು ಐದು ವರ್ಷ ಮುಖ್ಯಮಂತ್ರಿ ಆಗಿರುವ ವಿಶ್ವಾಸ ಇದೆಯೇ ಎಂದು ಸುನಿಲ್ ಕುಮಾರ್ ಪ್ರತಿ ಸವಾಲು ಹಾಕಿದರು.

ಸಚಿವ ಕೆ.ಜೆ.ಜಾರ್ಜ್, ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಏಕೆ ಎಂದು ತರಾಟೆಗೆ ತೆಗೆದುಕೊಂಡರು. ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ಎರಡೂವರೆ ವರ್ಷ ಅಧಿಕಾರ ಹಂಚಿಕೆಯೆಂದು ತೀರ್ಮಾನವಾಗಿಲ್ಲ ಅನವಶ್ಯಕವಾದ ಚರ್ಚೆ ಬೇಡ ಎಂದರು. ಪದೇ ಪದೇ ವಿರೋಧ ಪಕ್ಷಗಳ ಮೂದಲಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಗ ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಇರುತ್ತೇನೆ ಎಂದು ದೃಢವಾಗಿ ಹೇಳಿದರು.

Tags:
error: Content is protected !!