ಬೆಂಗಳೂರು : ಕೆಲವು ವಿವಾದಾತ್ಮಕ ನಡೆಗಳಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲವು ನಿಷ್ಕ್ರಿಯ ಸಚಿವರನ್ಮು ಕೈ ಬಿಟ್ಟು ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಂಪುಟ ಪುರ್ನರಚನೆಗೆ ಒಲವು ತೋರಿದೆ.
ಈ ಸಂಬಂಧ ಮಂಗಳವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರುಗಳು ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಜಿತ್ ಸಿಂಗ್ ಸುರ್ಜೇವಾಲ ಅವರುಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಸರ್ಕಾರ ರಚನೆಯಾಗಿ ಎರಡು ವರ್ಷ ಪೂರ್ಣಗೊಳಿಸಿದ್ದರೂ ಕೆಲವು ಸಚಿವರು ಇಲಾಖೆಯಲ್ಲಿ ಹೇಳಿಕೊಳ್ಳುವಂತಹ ಗಮನರ್ಹ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ. ಪರಿಣಾಮ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಹಾನಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೆಲವು ನಿಷ್ಕ್ರಿಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷ ಮತ್ತು ಸರ್ಕಾರಕ್ಕೆ ವರ್ಚಸ್ಸು ಹೆಚ್ಚಿಸುವವರನ್ನು ಸಂಪುಟಕ್ಕೆ ತೆಗೆದುಕೊಳ್ಳಿ ಎಂಬ ಸಲಹೆಯು ಸಭೆಯಲ್ಲಿ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬರೋಬ್ಬರಿ 15 ಸಚಿವರಿಗೆ ಸಂಪುಟದಿಂದ ಕಿತ್ತುಹಾಕಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೇ ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆ ವಹಿಸಿಕೊಂಡ ದಿನದಿಂದ ಯಾರು? ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರು ಕೆಲಸವನ್ನು ಸರಿಯಾಗಿ ನಿಭಾಯಿಸಿಲ್ಲ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲ ಎಂಬಂತೆ ಇರುವ ಸಚಿವರನ್ನು ಸಂಪುಟದಿಂದ ತೆಗೆಯಲು ಹೈಕಮಾಂಡ್ ನಿರ್ಧರಿಸಿದೆ. ಈ ನಡುವೆ ಹಿರಿಯ ಸಚಿವರ ಸ್ಪೋಟಕ ಹೇಳಿಕೆಯಿಂದ ಹಲವು ಮಂತ್ರಿಗಳ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ.
ರಾಜ್ಯದ ಕೆಲವು ಸಚಿವರಿಗೆ ಕೊಕ್ ನೀಡುವ ಸಾಧ್ಯತೆಯಿದ್ದು, ಹಲವು ಖಾತೆ ಬದಲಾವಣೆಯಾಗುವ ನಿರೀಕ್ಷೆಯಿದೆ. ಇದೇ ವಿಚಾರವಾಗಿ 10 ರಿಂದ 15 ಸಚಿವರು ಬದಲಾವಣೆ ಆದರೂ ಆಗಬಹುದು.
ಇನ್ನೂ ಸಚಿವ ಸ್ಥಾನ ನೀಡುವುದೇ ಆದರೆ 34 ಕ್ಕಿಂತ ಹೆಚ್ಚಿನ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗಲ್ಲ. ಸಚಿವ ಸ್ಥಾನ ಯಾರಿಗೆ ನೀಡಬೇಕು ಎನ್ನುವುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ. ಸಚಿವ ಸಂಪುಟ ಪುನರ್ ರಚನೆಯಾದರೆ ಸಚಿವರ ಬದಲಾವಣೆ ಆಗುತ್ತದೆ.
ಈ ನಡುವೆ ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಲು ಸಾಕಷ್ಟು ಮಂದಿ ನಾ ಮುಂದು, ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ. ವಿನಯ್ ಕುಲಕರ್ಣಿ, ಲಕ್ಷ್ಮಣ್ ಸವದಿ, ಕೆ.ವೈ.ನಂಜೇಗೌಡ, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ಬೇಳೂರು ಗೋಪಾಲಕೃಷ್ಣ, ಅಜಯ್ಸಿಂಗ್, ವಿಜಯಾನಂದ ಕಾಶಪ್ಪನವರ್, ಬಂಗಾರಪೇಟೆ ನಾರಾಯಣಸ್ವಾಮಿ ಸೇರಿದಂತೆ ಹಲವಾರು ಮಂದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಲಾಬಿ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಆರೇಳು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು, ಕೆಲವರ ಖಾತೆಗಳ ಬದಲಾವಣೆ ಮಾಡಬೇಕು ಎಂಬ ಚರ್ಚೆಗಳಿವೆ. ಈ ಹಿಂದೆ ವಿವಾದಿತ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದವರು ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದವರು, ಸಂಕಷ್ಟ ಸಂದರ್ಭದಲ್ಲಿ ಪಕ್ಷ ಮತ್ತು ನಾಯಕತ್ವದ ಪರವಾಗಿ ನಿಲ್ಲದೇ ಇರುವವರನ್ನು ಸಂಪುಟದಿಂದ ಕೈಬಿಟ್ಟು ಕ್ರಿಯಾಶೀಲ ಹಾಗೂ ಯುವ ನಾಯಕತ್ವಕ್ಕೆ ಮಣೆ ಹಾಕುವ ಸಂಬಂಧ ಚರ್ಚೆಗಳಾಗುತ್ತಿವೆ ಎಂದು ಹೇಳಲಾಗಿದೆ.
ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಲೇ ಒಳಗೊಳಗೇ ಕೆಲವರು ಸ್ಥಾನ ಗಿಟ್ಟಿಸಲು ಲಾಬಿ ನಡೆಸಿದರೆ ಇನ್ನು ಕೆಲವರು ಸಚಿವ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳಿದ್ದಾಗ್ಯೂ ಸೋಲು ಕಂಡಿರುವ ನಾಲ್ಕು ಕ್ಷೇತ್ರಗಳ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ. ಇದರಲ್ಲಿ ಕೆಲವರು ಅನಗತ್ಯವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿರುವುದು ಪಕ್ಷದ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಪುಟ ಪುನರ್ರಚನೆಗೆ ಕೈ ಇಟ್ಟರೆ ಒಂದಷ್ಟು ಸಮಸ್ಯೆಗಳನ್ನು ಎದುರಿಸಬೇಕಾಬಹುದು ಎಂಬ ಆತಂಕದ ನಡುವೆಯೂ ಹೈಕಮಾಂಡ್ ಸೂಚನೆಯನ್ನು ಚಾಚೂ ತಪ್ಪದೇ ಪಾಲಿಸಲು ರಾಜ್ಯನಾಯಕರು ಮುಂದಾಗಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳಿಂದ ಕಾಂಗ್ರೆಸ್ ಹೈಕಮಾಂಡ್ ರೋಸಿ ಹೋಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡು ವರ್ಷ ಪೂರೈಸಿದ ಹಿನ್ನೆಲೆ ಕೈ ಪಾಳಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಮೂಲಗಳು ತಿಳಿಸಿದ್ದವು.