ಆಗ್ರಾ: ಕಳೆದ ಮೂರು ದಿನಗಳಿಂದ ಆಗ್ರಾದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ತಾಜ್‌ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿದ್ದು, ಆವರಣದಲ್ಲಿರುವ ಉದ್ಯಾನಕ್ಕೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಆಗ್ರಾಗೆ ಬರುವ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖವಾಗಿದೆ.
ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆಯಾಗಿದ್ದು, ಸ್ಮಾರಕಕ್ಕೆ ಯಾವುದೇ ಹಾನಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಿರಿಯ ಅಧಿಕಾರಿ ರಾಜ್ ಕುಮಾರ್ ಪಟೇಲ್ ಅವರು, ಡ್ರೋನ್ ಕ್ಯಾಮರಾದ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಆಗ್ರಾದಲ್ಲಿ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಇನ್ನೂ ಎರಡು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.