Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಹಾಸನ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಮುಗಿಸಲು ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ

ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ ಮಾಜಿ ಪ್ರಧಾನಿ

ಹೊಸದಿಲ್ಲಿ: ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆ ಸಹಕಾರಿಯಾಗುವ ಹಾಗೂ ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗುವ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಈ ಬಗ್ಗೆ ಗುರುವಾರದಂದು ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು; ಇದು ಅತ್ಯಂತ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣವಾಗಿದ್ದು, ಕ್ಷಿಪ್ರಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಜನತೆಗೆ ಹೆಚ್ಚು ಅನುಕೂಲ ಆಗುತ್ತದೆ. ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂದು ಒತ್ತಿ ಹೇಳಿದರು.

ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಇತಿಹಾಸ ಪ್ರಸಿದ್ಧ ಬೇಲೂರು-ಹಳೇಬೀಡು- ಶ್ರವಣಬೆಳಗೋಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದರ ಜತೆಗೆ ಜಿಲ್ಲೆಯ ರೈತರಿಗೆ ಕೃಷಿ ರಫ್ತು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಅವರು ಕೋರಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಆಗಿರುವ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಅಸಂಖ್ಯಾತ ಪ್ರವಾಸಿಗರು ಬರುತ್ತಾರೆ. ಐತಿಹಾಸಿಕ ಬೇಲೂರು, ಹಳೆಬೀಡು ಹಾಗೂ ಶ್ರವಣಬೆಳಗೊಳ ಪ್ರವಾಸಿ ತಾಣಗಳಿಗೆ ಭೇಟಿ ಕೊಡಲು ಇವರೆಲ್ಲರೂ ಬರುತ್ತಾರೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ಅವರು ಹೇಳಿದರು.

ಈವರೆಗೆ ಹಲವಾರು ಸರ್ಕಾರಗಳು ಬಂದು ಹೋಗಿವೆ. ದುರದೃಷ್ಟವಶಾತ್ ಹಾಸನ ವಿಮಾನ ನಿಲ್ದಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆರ್ಥಿಕ ಹಾಗೂ ವ್ಯೂಹಾತ್ಮಕ ಉದ್ದೇಶದಿಂದ ಹಾಸನ ವಿಮಾನ ನಿಲ್ದಾಣ ಬಹಳ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಹಾಸನದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ಅತ್ಯುತ್ತಮ ಶಿಕ್ಷಕ ಸಂಸ್ಥೆಗಳು ಮತ್ತು ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಕಾಲೇಜುಗಳು ಇವೆ. ಅಲ್ಲದೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಗ್ರಹ ನಿಯಂತ್ರಣ ಕೇಂದ್ರವೂ ಅಲ್ಲಿದೆ. ಕಾಫಿ, ಚಹಾ ರಫ್ತಿನಲ್ಲಿ ಹಾಸನ ಮುಂಚೂಣಿಯಲ್ಲಿದೆ. ಇದು ವಿದೇಶಿ ವಿನಿಮಯ ಗಳಿಕೆಗೆ ಹೆಚ್ಚು ಪೂರ್ಕವಾಗಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯ ರೈತರು ಹಾಲು ಉತ್ಪಾದನೆಯ ಮೂಲಕ ₹900 ಕೋಟಿ ದುಡಿಮೆ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ಬಂದರೆ ಹಾಲು, ಹಾಲಿನ ಉತ್ಪನ್ನಗಳ ರಫ್ತಿಗೆ ಹೆಚ್ಚು ಅನುಕೂಲ ಆಗುತ್ತದೆ. ಹಾಗೆಯೇ, ಕಾಫಿ, ಚಹಾ ಇನ್ನಿತರೆ ಕೃಷಿ ಉತ್ಪನ್ನಗಳ ರಫ್ತಿಗೆ ಅನುಕೂಲವಾಗಿ ವಿಜ್ಞಾನ, ತಂತ್ರಜ್ಞಾನ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ದೇವೇಗೌಡರು ಪ್ರತಿಪಾದಿಸಿದರು.

ಹಾಸನವು ಮಂಗಳೂರು ಮತ್ತು ಚೆನ್ನೈ ಬಂದರುಗಳ ನಡುವೆ ಆಯಕಟ್ಟಿನ ಸ್ಥಳವಾಗಿದೆ ಎಂದು ವಿವರಿಸಿದ ಮಾಜಿ ಪ್ರಧಾನಿಗಳು; ಉತ್ತಮ ಸಂಪರ್ಕದಿಂದ ಹಾಸನ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರು-ಹಾಸನ ಹೆದ್ದಾರಿಯ ಭಾಗಗಳನ್ನು ಈಗಾಗಲೇ ಕೈಗಾರಿಕಾ ಕಾರಿಡಾರ್ ಎಂದು ಘೋಷಿಸಲಾಗಿದ್ದು, ಹೈದರಾಬಾದ್-ಬೆಂಗಳೂರು ಕಾರಿಡಾರ್ ಇದಕ್ಕೆ ಪೂರಕವಾಗಿದೆ ಎಂದು ಅವರು ಹೇಳಿದರು.

ಹಾಸನದಲ್ಲಿ ವಿಮಾನ ನಿಲ್ದಾಣವು ಬೆಂಗಳೂರು, ಮಂಗಳೂರು ಮತ್ತು ಚೆನ್ನೈಗಳನ್ನು ಉತ್ತಮವಾಗಿ ಸಂಪರ್ಕಿಸುತ್ತದೆ. ಇದು ಆರ್ಥಿಕವಾಗಿ ಲಾಭದಾಯಕ ಮತ್ತು ಕಾರ್ಯತಂತ್ರದ ಭಾಗವಾಗಿರುತ್ತದೆ ಎಂದು ಅವರು ನುಡಿದರು.

ರಾಜಕೀಯ ಅಡೆತಡೆಗಳು ಹಾಗೂ ಬದ್ಧತೆ

ಹಾಸನ ವಿಮಾನ ನಿಲ್ದಾಣ ಯೋಜನೆ ಎದುರಿಸುತ್ತಿರುವ ರಾಜಕೀಯ ಸವಾಲುಗಳನ್ನು ವಿವರಿಸಿದ ಮಾಜಿ ಪ್ರಧಾನಿ, ಬೆಂಗಳೂರಿನ ಹೆಚ್ ಎಎಲ್ ನಲ್ಲಿ ಲಘು ಯುದ್ಧ ವಿಮಾನ ನಿಲ್ದಾಣ ಮತ್ತು 65 ಆಸನಗಳ ಲಘು ವಿಮಾನಗಳ ಉತ್ಪಾದನೆಗೆ ಮಂಜೂರಾತಿ ನೀಡಿದ ವಿಷಯವನ್ನು ಉಲ್ಲೇಖಿಸಿದರು.

ಹಾಸನ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಕರ್ನಾಟಕದ ಐವರು ಮುಖ್ಯಮಂತ್ರಿಗಳು ರಾಜಕೀಯ ಮಾಡಿದ್ದಾರೆ. ನನ್ನ ಜೀವನದ ಕೊನೆಯ ಹಂತದಲ್ಲಿ, ನಾನು ಈ ಸದನದಲ್ಲಿ ಕುಳಿತು, ಈ ಯೋಜನೆಯು ಅಂತಿಮವಾಗಿ ಪೂರ್ಣಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರೈತರಿಗಾಗಿ, ಹಾಸನ ಜಿಲ್ಲೆಯ ಅಭಿವೃದ್ಧಿಗಾಗಿ, ಕರ್ನಾಟಕಕ್ಕಾಗಿ, ಭಾರತದ ಪ್ರಗತಿಗಾಗಿ ಈ ವಿಮಾನ ನಿಲ್ದಾಣ ಆದಷ್ಟು ಬೇಗ ನಿರ್ಮಾಣ ಆಗಬೇಕಿದೆ ಎಂದು ಅವರು ಒತ್ತಿ ಹೇಳಿದರು.

 

 

Tags: