Mysore
25
haze

Social Media

ಸೋಮವಾರ, 17 ನವೆಂಬರ್ 2025
Light
Dark

ಅಧಿವೇಶನ ನಡೆಯುವ ವೇಳೆ ಸಂಭ್ರಮದ ಹುಟ್ಟು ಆಚರಣೆ ಬೇಡ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಂಸತ್‌ ಹಾಗೂ ಸುವರ್ಣಸೌಧದಲ್ಲಿ ಸದನ ಕಲಾಪ ನಡೆಯುತ್ತಿರುವ ಕಾರಣ ಈ ವೇಳೆ ಸಂಭ್ರಮದ ಹುಟ್ಟು ಹಬ್ಬದ ಆಚರಣೆ ಬೇಡ ಎಂದು ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಡಿಸೆಂಬರ್ 16ರಂದು ನನ್ನ ಜನ್ಮದಿನವಾಗಿದ್ದು, ಪ್ರತಿವರ್ಷ ನೀವೆಲ್ಲಾ ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ. ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮ್ಮಲ್ಲಿ ನನ್ನದೊಂದು ವಿನಮ್ರ ಕಳಕಳಿಯ ಮನವಿ ಮಾಡುತ್ತಿದ್ದೇನೆ.

ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದೆ. ಹೀಗಾಗಿ ನಾನು ನವದೆಹಲಿಯಲ್ಲಿಯೇ ಉಳಿಯಬೇಕಾಗಿದೆ. ಅಲ್ಲದೇ ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪವೂ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.

ಇನ್ನು ತಾವುಗಳು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವಾದಿಸಿ ಅಷ್ಟು ಸಾಕು ನನಗೆ. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆಯೇ ಜಾತ್ಯತೀತ ಜನತಾದಳ ಪಕ್ಷದ ಮೂಲ ತತ್ವವಾಗಿದೆ. ಅದೇ ನನಗೆ ತಾವು ಕೊಡುವ ಉಡುಗೊರೆ ಎಂದು ತಿಳಿಸಿದ್ದಾರೆ.

Tags:
error: Content is protected !!