Mysore
19
broken clouds

Social Media

ಭಾನುವಾರ, 25 ಜನವರಿ 2026
Light
Dark

ವಿಧಾನಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಅಂಗೀಕಾರ

DK Shivakumar

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳನ್ನು ಗ್ರೇಟರ್ ಬೆಂಗಳೂರು ಅಥವಾ ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತಗೊಳಿಸಿ ಸ್ವಾಯತ್ತಗೊಳಿಸುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು.

ಶಾಸನ ರಚನ ಕಲಾಪದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ನ್ನು ಪರ್ಯಾಲೋಚನೆಗೆ ಮಂಡಿಸಿ ಅಂಗೀಕಾರಕ್ಕೆ ಮನವಿ ಮಾಡಿದರು.

ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ ನೀಡುವ ಸಂವಿಧಾನ ತಿದ್ದುಪಡಿ 73 ಮತ್ತು 74 ಅನ್ನು ಹಿಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ರೂಪಿಸಿದರು. ಅದರ ಅನುಸಾರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ರೂಪಿಸಲಾಗಿದ್ದ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಕೆಲವರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ ನ್ಯಾಯಾಲಯ ಪಾಲಿಕೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಅಭಿಪ್ರಾಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿಧೇಯಕ ರೂಪಿಸಲಾಗಿದೆ ಎಂದರು.

ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್, ಈ ಕಾಯ್ದೆಯ ಉದ್ದೇಶ ಮತ್ತು ಅನಿವಾರ್ಯತೆ ಏನು ಎಂದು ಪ್ರಶ್ನಿಸಿದರು. ಇನ್ನು ಮುಂದೆ ಸರ್ಕಾರ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಬಿಎಂಪಿ ವ್ಯಾಪ್ತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಒತ್ತಾಯಿಸಿದರು.

ಡಾ.ಸಿ.ಎನ್.ಅಶ್ವಥ್ ನಾರಾಯಣ, ಮುಖ್ಯಮಂತ್ರಿ ಅವರು ರಾಜ್ಯ ಸರ್ಕಾರಕ್ಕೂ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎರಡಕ್ಕೂ ಮುಖ್ಯಸ್ಥರು. ಸ್ಥಳೀಯ ಸಂಸ್ಥೆಗಳಿಗೆ ಸ್ವಾಯತತ್ತೆ ನೀಡಬೇಕು ಎಂದು ರಾಜೀವ್ ಗಾಂಧಿ ಕಾನೂನು ತಿದ್ದುಪಡಿ ತಂದಿದ್ದರು. ಡಿ.ಕೆ.ಶಿವಕುಮಾರ್ ಅವರು ಅದಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೈಕೋರ್ಟ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗ್ರೇಟರ್ ಬೆಂಗಳೂರು ಕಲ್ಪನೆಯೇ ಸಂವಿಧಾನ ವಿರೋಧಿ ಎಂದು ಆಕ್ಷೇಪಿಸಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗ್ರೇಟರ್ ಬೆಂಗಳೂರು ಎಂಬುದು ಇಂಗ್ಲೀಷ್ ಪದ, ಸರ್ಕಾರಕ್ಕೆ ಕನ್ನಡದ ಒಳ್ಳೆಯ ಪದ ಸಿಗಲಿಲ್ಲವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕಾರ ವಿಕೇಂದ್ರೀಕರಣಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ. ಒಂದು ಪಾಲಿಕೆಗೆ ಹೆಚ್ಚು ತೆರಿಗೆ ಬಂದರೆ ಮತ್ತೊಂದು ಪಾಲಿಕೆಗೆ ಸಂಪನ್ಮೂಲದ ಕೊರತೆಯಾಗಲಿದೆ. ಈ ರೀತಿಯ ಗೊಂದಲಗಳಿವೆ, ಪಾಲಿಕೆಗಳು ಪರಾವಲಂಬಿ ಆಗದಂತೆ ಎಚ್ಚರಿಕೆ ವಹಿಸಬೇಕು. ಸರ್ಕಾರ ಆಡಳಿತದಲ್ಲಿ ಕಪಿಮುಷ್ಟಿ ಇಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಚರ್ಚೆಗೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಧಿಕಾರ ವಿಕೇಂದ್ರೀಕರಣದ ಕಲ್ಪನೆಗೆ ಧಕ್ಕೆಯಾಗಲು ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:
error: Content is protected !!