ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ಟೀಂ ತೊಡೆತಟ್ಟಿದೆ. ಆದರೆ ವಿಜಯೇಂದ್ರ ಪರ ಇನ್ನೊಂದು ಬಣ ಬ್ಯಾಟ್ ಬೀಸಿದೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಫೆಬ್ರವರಿ.10ಕ್ಕೆ ಸಿಹಿಸುದ್ದಿ ಸಿಗಲಿದೆ ಎಂದು ಹೇಳಿದ್ದು, ಯತ್ನಾಳ್ ಬಣದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.
ಈ ಮೂಲಕ ರೇಣುಕಾಚಾರ್ಯ ಅವರು ಯತ್ನಾಳ್ ಟೀಂಗೆ ಬಿಗ್ ಶಾಕ್ ನೀಡಿದ್ದಾರೆ ಎನ್ನಲಾಗಿದ್ದು, ಮತ್ತೊಮ್ಮೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಯತ್ನಾಳ್ ಅಂಡ್ ಟೀಂ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡದೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಬಿ.ವೈ.ವಿಜಯೇಂದ್ರ ಪರ ಒಲವು ತೋರಿದೆ ಎನ್ನಲಾಗಿದ್ದು, ಇದೇ ಫೆಬ್ರವರಿ.10ರಂದು ಎಲ್ಲಾ ಸಮಸ್ಯೆಗಳಿಗೆ ಸಂಪೂರ್ಣ ತೆರೆ ಬೀಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಪರ ಇರುವ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿದ್ದು, ವಿಜಯೇಂದ್ರ ಮತ್ತೊಮ್ಮೆ ರಾಜ್ಯಾಧ್ಯಕ್ಷರಾಗುವ ಎಲ್ಲಾ ಮುನ್ಸೂಚನೆಗಳು ಕಾಣಿಸುತ್ತಿವೆ ಎನ್ನಲಾಗಿದೆ.