ಬೆಂಗಳೂರು : ಹಲವು ದಿನಗಳ ಬೇಡಿಕೆಯಂತೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2 ಸಾವಿರ ರೂ. ನಿಂದ 2,500 ರೂ.ಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕಲಾವಿದರ ಮಾಸಾಶನ 2000 ರೂಪಾಯಿಗಳಿದ್ದು, ಅದನ್ನು ಹೆಚ್ಚಿಸಿ 2500 ಮಾಡಲಾಗಿದ್ದು, ಇದಕ್ಕಾಗಿ 32.94 ಕೋಟಿ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದೆ.
2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಕಲಾವಿದರ ಮಾಸಾಶನವನ್ನು 2 ಸಾವಿರ ರೂ. ನಿಂದ 2,500 ರೂ. ಗೆ ಹೆಚ್ಚಿಸಲಾಗಿದೆ. ಇದಕ್ಕೆ ಬೇಕಾಗುವ 40,76,72,000 ರೂ. ಬಿಡುಗಡೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.
ಈ ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ, 2,500 ರೂ. ಮಾಸಾಶನ ನೀಡಲು ಅನುಮೋದನೆ ನೀಡಿದೆ. ಕಲಾವಿದರ ಮಾಸಾಶನ ಪಾವತಿಸಲು ತಗಲುವ ವೆಚ್ಚ 32,94,61,000 ರೂ. ಬಿಡುಗಡೆ ಮಾಡಲು ಸರ್ಕಾರ ಮಂಜೂರಾತಿ ನೀಡಿದೆ.
ಕಳೆದ ವರ್ಷ ನಾಟಕ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಕಲಾವಿದರ ಮಾಸಾಶನವನ್ನು ಎರಡು ಸಾವಿರದಿಂದ ಮೂರು ಸಾವಿರಕ್ಕೆ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ 2500 ರೂಪಾಯಿ ಏರಿಕೆ ಮಾಡಲಾಗಿದೆ. ಅಸಲಿಗೆ ಕಲಾವಿದರಿಗೆ ತಿಂಗಳ ಮಾಸಾಶನವಾಗಿ ಐದು ಸಾವಿರ ರೂಪಾಯಿ ನೀಡಬೇಕು ಎಂಬುದು ಸಂಘದ ಬೇಡಿಕೆ ಆಗಿತ್ತು. ಈಗ 500 ರೂಪಾಯಿಗಳನ್ನು ಮಾತ್ರವೇ ಏರಿಕೆ ಮಾಡಲಾಗಿದೆ.
60 ವರ್ಷ ಮೀರಿದ 12,543 ಮಂದಿ ಕಲಾವಿದರು ರಾಜ್ಯದಾದ್ಯಂತ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಮಾಸಾಶನ ಪಡೆಯುತ್ತಿದ್ದರು. ಇನ್ನು ಮುಂದೆ ಇಷ್ಟೂ ಮಂದಿಗೆ 2500 ರೂಪಾಯಿ ಮಾಸಾಶನ ದೊರೆಯಲಿದೆ. ಅಲ್ಲದೆ ಗ್ರಾಮಗಳಲ್ಲಿ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ಕೊಡಿಸುವ ಕ್ರಮವನ್ನು ಕೈಗೊಳ್ಳುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳೆದ ವರ್ಷ ಹೇಳಿತ್ತು.
2023 ರಿಂದಲೂ ಈ ಮಾಸಾಶನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಭೆಗಳು, ಅನುಮೋದನೆಗಳು, ಬೇಡಿಕೆ ಸಲ್ಲಿಕೆ ಇನ್ನಿತರೆಗಳು ನಡೆಯುತ್ತಲೇ ಇದ್ದವು. ಕಳೆದ ವರ್ಷ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ ಬಳಿಕ ಪ್ರಕ್ರಿಯೆಗೆ ಇನ್ನಷ್ಟು ಚುರುಕು ದೊರಕಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರೂ ಸಹ ಈ ಬಗ್ಗೆ ಭರವಸೆ ನೀಡಿದ್ದರು. ಕೊನೆಗೆ ಮಾಸಾಶನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಇಲಾಖೆ ಬಿಡುಗಡೆ ಮಾಡಿದೆ.





