ಬೆಂಗಳೂರು : ಬಿಜೆಪಿ ಸಂಸದ ಕೆ.ಸುಧಾಕರ್ ಅವರ ಪತ್ನಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ಲಕ್ಷ ಲಕ್ಷ ಹಣ ದೋಚಿರುವ ಘಟನೆ ನಡೆದಿದೆ.
ಸಂಸದ ಸುಧಾಕರ್ ಪತ್ನಿ ಡಾ.ಪ್ರೀತಿ ಅವರಿಗೆ ಕರೆ ಮಾಡಿರುವ ವಂಚಕರು, ಡಿಜಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿ 14 ಲಕ್ಷ ರೂ ದೋಚಿದ್ದಾರೆ.
ಮುಂಬೈ ಸೈಬರ್ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿರುವ ವಂಚಕರು ನಿಮ್ಮ ಹೆಸರಿನಲ್ಲಿರುವ ದಾಖಲೆಗಳನ್ನು ಸದ್ದತೆ ಖಾನ್ ಎಂಬಾತ ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅದರಿಂದ ಅಕ್ರಮ ವ್ಯವಹಾರ ನಡೆಸುತ್ತಿದ್ದಾನೆ.
ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್ ದೇಶಗಳಿಗೆ ಕಾನೂನು ಬಾಹಿರ ಚಟುವಟಿಕೆ ನಡೆಸಲು ಜನರನ್ನು ಕಳುಹಿಸಿದ್ದಾನೆ. ಪ್ರಕರಣದಲ್ಲಿ ಸದ್ದತ್ ಖಾನ್‌ನನ್ನು ಅರೆಸ್ಟ್ ಮಾಡಲಾಗಿದೆ. ಆತ ನಿಮ್ಮ ಹೆಸರನ್ನು ಬಾಯ್ಬಿಟ್ಟಿದ್ದಾನೆ. ನಿಮ್ಮ ಹೆಸರಿನಲ್ಲಿರುವ ದಾಖಲೆಗಳನ್ನು ಕೊಟ್ಟಿದ್ದಾನೆ. ಹಾಗಾಗಿ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ನಿಮ್ಮ ದಾಖಲೆ, ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ನಿಮ್ಮ ಖಾತೆ ಅಕ್ರಮವಾಗಿದ್ದು, ಪರಿಶೀಲನೆ ನಡೆಸಬೇಕು ಹಣ ಹಾಕುವಂತೆ 14 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ.
ವಂಚಕರು ಕೇಳಿದ ಖಾತೆಗೆ ಪ್ರೀತಿಯವರು ಹಣ ವರ್ಗಾಯಿಸಿದ್ದಾರೆ. ಕೆಲ ಸಮಯದಲ್ಲಿ ತನಗೆ ವಂಚನೆ ಆಗಿದೆ ಎಂದು ಗೊತ್ತಾಗಿದೆ. ತಕ್ಷಣ ವೆಸ್ಟ್ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪ್ರೀತಿ ಸುಧಾಕರ್ ಹಾಕಿರುವ ಖಾತೆಯ ಅಕೌಂಟ್ ಫ್ರೀಜ್ ಮಾಡಲಾಗಿದೆ.
ಖಾತೆಯಿಂದ 14 ಲಕ್ಷ ಹಣವನ್ನು ಪ್ರೀತಿಯವರಿಗೆ ಮರಳಿಸಲಾಗಿದೆ. ಸದ್ಯ ಸೈಬರ್ ವಂಚಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.





