ಚಿಕ್ಕಮಗಳೂರು : ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಹಾಗೂ ಪ್ರವಾಸಿ ತಾಣವಾಗಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕಾಡ್ಗಿಚ್ಚು ಹಬ್ಬಿದ್ದು ಬೆಂಕಿಯ ಕೆನ್ನಾಲಿಗೆ ನೂರಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ.
ಮುಳ್ಳಯ್ಯನಗಿರಿ ತಪ್ಪಲು ಅಂದ್ರೆನೆ ಅಪರೂಪದ ಸಸ್ಯ ಸಂಪತ್ತಿನ ರಾಶಿ. ಬಿಸಿಲಿನ ಝಳಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ ಪರಿಣಾಮ ನೂರಾರು ಎಕರೆ ಅಪರೂಪದ ಸಸ್ಯರಾಶಿ ಕೂಡ ಸುಟ್ಟು ಭಸ್ಮವಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಲು ಹರಸಾಹಸ ಪಡ್ತಿದ್ದಾರೆ. ಅರಣ್ಯ ಇಲಾಖೆ, ಅಗ್ನಿ ಶಾಮಕ ಸಿಬ್ಬಂದಿಗಳ ಜೊತೆ ಸ್ಥಳಿಯರು ಕೂಡ ಬೆಂಕಿ ನಂದಿಸಲು ಕೈಜೋಡಿಸಿದ್ದಾರೆ.
ಆದರೆ, ಭಾರೀ ಗಾಳಿಗೆ ಬೆಂಕಿಯ ಜ್ವಾಲೆ ಹರಡುತ್ತಲೇ ಇದ್ದು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಇಂದು ಭಾನುವಾರವಾಗಿರೋದ್ರಿಂದ ನೂರಾರು ಪ್ರವಾಸಿಗರು ಕೂಡ ಸಿಕ್ಕಿಬಿದ್ದಿದ್ದಾರೆ.
ಮುಳ್ಳಯ್ಯನಗಿರಿ ಮಾರ್ಗದಲ್ಲೇ ಬೆಂಕಿ ಹತ್ತಿರೋದ್ರಿಂದ ರಸ್ತೆ ಬದಿಯಲ್ಲೂ ಬೆಂಕಿ ಹತ್ತಿಕೊಂಡಿದ್ದು ಕೆಲ ಪ್ರವಾಸಿಗರು ಮುಳ್ಳಯ್ಯನಗಿರಿಯಿಂದ ಚಿಕ್ಕಮಗಳೂರಿಗೆ ಬರಲು ಸಾಧ್ಯವಾಗದೇ ಮುಳ್ಳಯ್ಯನಗಿರಿ ಮಾರ್ಗದಲ್ಲೇ ಜಾಮ್ ಆಗಿದ್ದಾರೆ.
ಅರಣ್ಯ ಅಧಿಕಾರಿಗಳು ಬೆಂಕಿಯ ಜ್ವಾಲೆ ಸ್ವಲ್ಪ ಕಡಿಮೆಯಾದ ಬಳಿಕ ಕಳಿಸುತ್ತೇವೆ ಎಂದು ಹೇಳಿ ಅಲ್ಲೆ ಉಳಿಸಿಕೊಂಡಿದ್ದಾರೆ. ಆದರೆ, ಬೆಂಕಿಯಿಂದ ಪ್ರವಾಸಿಗರು ಸೇರಿದಂತೆ ಯಾರಿಗೂ ತೊಂದರೆಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿಗಳು ರಸ್ತೆಯಲ್ಲಿ ನಿಂತು ಆಕಾಶಕ್ಕೆ ನೀರನ್ನ ಚಿಮ್ಮಿಸುವ ಮೂಲಕ ಬೆಂಕಿಯನ್ನ ನಂದಿಸಿದ್ದಾರೆ.
ಬಿಸಿಲ ದಗೆಗೆ ಅರಣ್ಯ ಸಂಪೂರ್ಣ ಒಣಗಿ ನಿಂತಿರೋದ್ರಿಂದ ನೋಡನೋಡುತ್ತಿದ್ದಂತೆ ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದ್ದು ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತು ಉಂಟಾಗಿದೆ.