ಕನಕಪುರ: ಇಲ್ಲಿನ ಮೇಕೆದಾಟು ನದಿಯಲ್ಲಿ ಈಜಲು ಹೋದ ಐವರು ವಿದ್ಯಾರ್ಥಿಗಳು ನೀರುಪಾಲಾಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನ ಇಬ್ಬರು ಯುವಕರು ಹಾಗೂ ಮೂವರು ವಿದ್ಯಾರ್ಥಿಗಳು ಮೇಕೆದಾಟುಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಆಳವಾದ ಜಾಗದಲ್ಲಿ ಈಜಲು ತೆರಳಿದ ವಿದ್ಯಾರ್ಥಿಗಳು ನೀರಿನ ರಭಸಕ್ಕೆ ಸಿಕ್ಕಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಮೃತರನ್ನು ಪೀಣ್ಯ ಎರಡನೇ ಹಂತದ ಹರ್ಷಿತ, ವರ್ಷ, ಸ್ನೇಹ, ಅಭಿಷೇಕ್ ಹಾಗೂ ತೇಜಸ್ ಎಂದು ಗುರುತಿಸಲಾಗಿದೆ. ವಿಷಯ ತಿಳಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಐವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಈ ಬಗ್ಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.