ವಿಜಯಪುರ: ಹೈಕಮಾಂಡ್‌ಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರರ ಕರ್ಮಕಾಂಡಗಳ ಬಗ್ಗೆ ವಿವರಣೆ ನೀಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ನಾನು ಹಾಗೂ ನಮ್ಮ ತಂಡ ದೆಹಲಿಗೆ ಹೋಗುತ್ತೇವೆ. ಹೈಕಮಾಂಡ್ ಭೇಟಿ ಮಾಡಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಕರ್ಮಕಾಂಡಗಳ ಬಗ್ಗೆ ಹೈಕಮಾಂಡ್‌ಗೆ ಸಂಪೂರ್ಣ ವಿವರಣೆ ನೀಡುತ್ತೇವೆ ಎಂದು ತಿಳಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯಿಂದ ಭ್ರಷ್ಟಾಚಾರಿ ಕುಟುಂಬವನ್ನು ರಾಜ್ಯದಿಂದ ಕಿತ್ತೊಗೆಯಬೇಕು. ಹಿಂದುತ್ವ ಇರುವಂತಹ ವ್ಯಕ್ತಿಗಳ ಕೈಯಲ್ಲಿ ನಾಯಕತ್ವ ಇರಬೇಕು. ಬಿಜೆಪಿಯಲ್ಲಿ ಮಹಾಭ್ರಷ್ಟ ಕುಟುಂಬ ಬೇಕಾ, ಪಕ್ಷದ ಕಾರ್ಯಕರ್ತರು ಬೇಕಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಚುನಾವಣೆ ನಡೆದರೆ ಮತ್ತೆ ರಾಜ್ಯಾಧ್ಯಕ್ಷರಾಗುವ ವಿಶ್ವಾಸ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಯತ್ನಾಳ್ ಅವರು, ಠೇವಣಿ ಕಳೆದುಕೊಳ್ಳುವವರು ಕೂಡ ನಾನೇ ಗೆಲ್ಲುತ್ತೇನೆ ಅಂತಾನೆ. ಈಗ ಹೈಕಮಾಂಡ್‌ನಲ್ಲಿ ಮೂರು ವಿಷಯಗಳು ಸ್ಪಷ್ಟವಾಗಬೇಕು. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ನಾಳೆ ದೆಹಲಿಗೆ ತೆರಳುವ ನಿಯೋಗ ತುಂಬಾ ದೊಡ್ಡದಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಮುಂದುವರಿದರೆ ಬಿಜೆಪಿಗೆ ಇನ್ನೂ ಹೀನಾಯ ಸ್ಥಿತಿ ಎಂದು ಗೊತ್ತಾಗಿದೆ ಎಂದು ಕಿಡಿಕಾರಿದರು.