ಬೆಂಗಳೂರು : ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿ ಕರ್ನಾಟಕದ 18 ಕಡೆ ಇಡಿ ದಾಳಿ ಮಾಡಿದೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ ದಾಳಿ ಮಾಡಿದ್ದು, ಬೆಳಿಗ್ಗೆ 6 ಗಂಟೆಯಿಂದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದರು.
2021-22 ರಲ್ಲಿ ನಡೆದಿದ್ದ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್ ಕಾಲೇಜಿನ ಟ್ರಸ್ಟ್ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೀಟ್ ಬ್ಲಾಕಿಂಗ್ ಕುರಿತು ರಮೇಶ್ ನಾಯಕ್ ದೂರು ನೀಡಿದ್ದರು. ಹಾಗಾಗಿ ಟ್ರಸ್ಟ್ ಅಧ್ಯಕ್ಷೆ ರಾಗಿಣಿ ನಾರಾಯಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಎಐಸಿಟಿಇ, ಯುಜಿಸಿ ನಿಯಮ ಉಲ್ಲಂಘಿಸಿ ಮೆರಿಟ್ ಸೀಟ್ ಹಂಚಿಕೆ ಮಾಡದೆ, ಅಕ್ರಮವಾಗಿ ಏಜೆಂಟ್‌ಗಳ ಮೂಲಕ ಸೀಟ್ ಹಂಚಿಕೆ ಮಾಡಲಾಗಿತ್ತು. ಆ ಮೂಲಕ ಖಾಸಗಿ ಕಾಲೇಜುಗಳು ಕೋಟ್ಯಂತರ ರೂ. ಹಣ ಸಂಗ್ರಹ ಮಾಡಿರುವ ಆರೋಪ ಕೇಳಿಬಂದಿತ್ತು.
ಎರಡನೇ ಬಾರಿಗೆ ಆಕಾಶ್ ಇಂಜಿನಿಯರಿಂಗ್ ಕಾಲೇಜ್ ಮೇಲೆ ಇಡಿ ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಆಕಾಶ್ ಇಂಜಿನಿಯರಿಂಗ್ ಕಾಲೇಜ್ ಮೇಲೆ ಇಡಿ ಅಽಕಾರಿಗಳು ದಾಳಿ ಮಾಡಿದ್ದಾರೆ. ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಆರೋಪದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಆಕಾಶ್ ಇಂಜಿನಿಯರಿಂಗ್ ಕಾಲೇಜ್ ಮೇಲೆ ದಾಳಿ ಮಾಡಿರುವ ಅಽಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದರು.
ಏನಿದು ಸೀಟ್ ಬ್ಲಾಕಿಂಗ್ ದಂಧೆ?
ಸೀಟ್‌ಗಳನ್ನು ಮೊದಲೇ ಕಾಯ್ದಿರಿಸುವುದು ಅಥವಾ ರಿಸರ್ವೇಶನ್ ಪದ್ಧತಿ ಎನ್ನಬಹುದು. ಕೆಲವು ಪ್ರತಿಷ್ಠಿತ ಕಾಲೇಜುಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸೀಟ್‌ಗಳನ್ನು ರಿಸರ್ವ್ ಮಾಡುತ್ತವೆ ಎನ್ನಬಹುದು.
ಪ್ರತಿ ವರ್ಷ ಅತ್ಯುತ್ತಮ ಕಾಲೇಜುಗಳಿಗೆ ಸೇರಬೇಕೆಂಬುದು ಮಕ್ಕಳು ಮತ್ತು ಪೋಷಕರಲ್ಲಿ ತವಕ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಈ ಸೀಟ್ ಬ್ಲಾಕಿಂಗ್ ದಂಧೆ ನಡೆಸಿವೆ.
ಏನಿದು ಪ್ರಕರಣ?
ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಬ್ಬಂದಿ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿತ್ತು. 2024-25ನೇ ಸಾಲಿಗಾಗಿ ವಿವಿಧ ಸ್ನಾತಕ ಇಂಜಿನಿಯರಿಂಗ್ ಕೋರ್ಸ್ ಪ್ರವೇಶದ ವೇಳೆಯಲ್ಲಿ ಕೆಇಎ ಅಧಿಕಾರಿಯೊಬ್ಬರು ಸೀಟು ಬ್ಲಾಕಿಂಗ್ ಅನುಮಾನದ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ನವೆಂಬರ್ 13 ರಂದು ಈ ಹಗರಣ ಬೆಳಕಿಗೆ ಬಂದಿತ್ತು.





