Mysore
29
few clouds

Social Media

ಶುಕ್ರವಾರ, 06 ಡಿಸೆಂಬರ್ 2024
Light
Dark

ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್‌

ಮಂಗಳೂರು: ಡ್ರಗ್ಸ್‌ ಜಾಲವನ್ನು ಬಂಧಿಸಲು ರಾಜ್ಯ ಪೊಲೀಸ್‌ ಇಲಾಖೆ ಸಮರ ಸಾರಿದ್ದು, ಪೂರೈಕೆ ಮಾಡುವ ಡ್ರಗ್‌ ಪೆಡ್ಲರ್‌ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು(ನ.30) ಪೊಲೀಸ್‌ ವಸತಿಗೃಹ ಹಾಗೂ ನೂತನ ಠಾಣೆಯ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಡ್ರಗ್ಸ್‌ ಹಾವಳಿ ಕುರಿತು ಸದನದಲ್ಲಿ ಚರ್ಚಿಸಿದ್ದೇವೆ. ಹೀಗಾಗಿ ಡ್ರಗ್ಸ್‌ ಜಾಲವನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ಸ್‌ ಮಾರಾಟ ಹಾಗೂ ಪೂರೈಕೆ ಮಾಡುವ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಬೇಕು ಎಂದು ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿ ನಾಶ ಮಾಡಲಾಗಿದೆ. ಈಗಾಗಲೇ ರಾಜ್ಯ ಪೊಲೀಸ್‌ ಇಲಾಖೆ ವತಿಯಿಂದ ಡ್ರಗ್ಸ್‌ ಜಾಲದ ಹಿಂದಿನ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ವಿದೇಶಿ ವಿದ್ಯಾರ್ಥಿಗಳು ಕೂಡ ಡ್ರಗ್ಸ್‌ ಜಾಲದ ಹಿಂದೆ ಇದ್ದಾರೆಂಬ ಶಂಕೆ ಪತ್ತೆಯಾಗಿದೆ. ಹೀಗಾಗಿ ಅಂತಹ ವಿದ್ಯಾರ್ಥಿಗಳ ಬಗ್ಗೆ ಆಯಾ ದೇಶಗಳ ರಾಯಭಾರ ಕಚೇರಿಗೆ ಮಾಹಿತಿ ನೀಡಿ ಆ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ನಮ್ಮದೇ ಮಕ್ಕಳು ದಂಧೆಗೆ ಸಿಲುಕಿ ಹಾಳಾಗುತ್ತಾರೆ. ಈ ಕಾರಣಕ್ಕೆ ಪ್ರತಿ ತಿಂಗಳು ಆಯಾಯ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಡ್ರಗ್ಸ್‌ ಸೇವನೆ ಹಾಗೂ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

 

Tags: