ನವದೆಹಲಿ: ಒತ್ತುವರಿ ಮಾಡಿಲ್ಲ ಎಂದಾದರೆ ಕುಮಾರಸ್ವಾಮಿ ಏಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ನವದೆಹಲಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಅಳತೆ ಹಾಗೂ ದಾಖಲೆ ಇರುತ್ತದೆ. ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದಾದರೆ ಕುಮಾರಸ್ವಾಮಿ ಭಯಪಡುವುದು ಬೇಡ ಎಂದರು.
ಕುಮಾರಸ್ವಾಮಿ ಅವರ ವಿರುದ್ಧ ನಾನು ಹಾಗೂ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತಿಲ್ಲ. ಇದು ಬಹಳ ವರ್ಷದಿಂದ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾನು ಕೂಡ ವಾಟ್ಸಾಪ್‌ನಲ್ಲಿ ಈ ಸುದ್ದಿಯನ್ನು ನೋಡಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಒಳಮೀಸಲಾತಿ ವಿಚಾರವಾಗಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿಗೆ ನಾವು ಬದ್ಧವಾಗಿದ್ದೇವೆ. ಬೋವಿಗಳು, ಲಂಬಾಣಿ, ಕೊರಮ, ಕೊರಚ, ಎಡಗೈ, ಬಲಗೈಗೆ ಸೇರಿದ ಸಮುದಾಯಗಳಿವೆ. ಅವರೆಲ್ಲಾ ಸೇರಿ ಒಂದು ತೀರ್ಮಾನಕ್ಕೆ ಬಂದರೆ ಸಂತೋಷ ಎಂದರು.