Mysore
22
few clouds

Social Media

ಶನಿವಾರ, 31 ಜನವರಿ 2026
Light
Dark

ಎರಡನೇ ಬಾರಿಗೆ ಇಡಿ ವಿಚಾರಣೆಗೆ ಹಾಜರಾದ ಮಾಜಿ ಸಂಸದ ಡಿ.ಕೆ.ಸುರೇಶ್‌

D K Suresh

ಬೆಂಗಳೂರು: ಐಶ್ವರ್ಯಗೌಡ ವಿರುದ್ಧ ಚಿನ್ನವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ರನ್ನು ಜಾರಿ ನಿರ್ದೇಶನಾಲಯ ಎರಡನೇ ಬಾರಿಗೆ ವಿಚಾರಣೆಗೊಳಪಡಿಸಿದೆ.

ಐಶ್ವರ್ಯಗೌಡ ಹಲವಾರು ಮಂದಿಗೆ ಚಿನ್ನವ್ಯಾಪಾರದ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದರು. ಈ ವೇಳೆ ಆಕೆ ತಾವು ಡಿ.ಕೆ. ಸುರೇಶ್‍ರವರ ಸಹೋದರಿ ಎಂದು ಹೇಳಿಕೊಂಡಿದ್ದರು. ನಟರೊಬ್ಬರು ಡಿ.ಕೆ. ಸುರೇಶ್‍ರವರ ಧ್ವನಿಯನ್ನು ಮಿಮಿಕ್ರಿ ಮಾಡಿ ಉದ್ಯಮಿಗಳ ಜೊತೆ ಮಾತನಾಡಿದ್ದರು. ಬಹುಕೋಟಿ ಹಗರಣವನ್ನು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಡಿ.ಕೆ.ಸುರೇಶ್‍ರವರಿಗೆ ನೋಟೀಸ್ ನೀಡಿತ್ತು.

ಕಳೆದ ಜೂ.23 ರಂದು ಡಿ.ಕೆ.ಸುರೇಶ್ ವಿಚಾರಣೆಗೆ ಹಾಜರಾಗಿದ್ದರು. ಮತ್ತಷ್ಟು ಮಾಹಿತಿ ಸಂಗ್ರಹಕ್ಕಾಗಿ ಜಾರಿ ನಿರ್ದೇಶನಾಲಯ ಎರಡನೇ ಬಾರಿ ನೋಟೀಸ್ ನೀಡಿದ್ದು, ಅದರಂತೆ ಇಂದು ಡಿ.ಕೆ. ಸುರೇಶ್ ವಿಚಾರಣೆಗೆ ಹಾಜರಾಗಿದ್ದರು. ಅವರ ಜೊತೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತಿತರರು ಹಾಜರಿದ್ದರು.

ಆದರೆ ಎಲ್ಲರನ್ನೂ ಹೊರಗಿರಿಸಿ ಡಿ.ಕೆ. ಸುರೇಶ್‍ರವರನ್ನು ಮಾತ್ರ ಕಚೇರಿ ಒಳಗೆ ಕರೆದುಕೊಂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ. ಹಲವು ರೀತಿಯ ಪ್ರಶ್ನೆಗಳನ್ನು ಡಿ.ಕೆ.ಸುರೇಶ್‍ಗೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಐಶ್ವರ್ಯಗೌಡ ಅವರ ವಂಚನೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಡಿ.ಕೆ. ಸುರೇಶ್ ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಆಕೆಯ ವಿರುದ್ಧ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಡಿ.ಕೆ.ಸುರೇಶ್ ದೂರು ನೀಡಿದ್ದರು. ಅದರ ಹೊರತಾಗಿಯೂ ಜಾರಿ ನಿರ್ದೇಶನಾಲಯ ವಿಚಾರಣೆ ಮುಂದುವರೆಸಿದ್ದು, ಇಂದು ಕೂಡ ವಿಚಾರಣೆ ನಡೆಸಿದೆ.

Tags:
error: Content is protected !!