ಬೆಂಗಳೂರು: ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರಿನಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು, ಕೆಲಕಾಲ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗೋದನ್ನು ಯಾರು ತಪ್ಪಿಸಲು ಆಗಲ್ಲ. ಸುಮ್ಮನೆ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎನ್ನುತ್ತಿದ್ದಾರೆ. ಇದೆಲ್ಲಾ ಬಾಲಿಶತನ. ರಾಜ್ಯದಲ್ಲಿ 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಅಪಾರ. ಎಲ್ಲದಕ್ಕೂ ಡಿಕೆಶಿಯರದ್ದು ಖರ್ಚು ಕೂಡ ಆಗಿದೆ. ಆದ್ದರಿಂದ ಡಿಕೆಶಿ ಸಿಎಂ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಆಪ್ತ ಶಾಸಕರಿಗೆ ಟಾಂಗ್ ಕೊಟ್ಟರು.
ಇನ್ನು ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಇದು ಅನಾವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು. ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇನು ಕಾಂಗ್ರೆಸ್ ಕಟ್ಟಿದವರಲ್ಲ. ಅವರಿಗೇನು ಆಗಬೇಕು? ಇದು ಅನಾವಶ್ಯಕ ಎಂದು ಸಿಎಂ ಸಿದ್ದರಾಮಯ್ಯರನ್ನು ಕುಟುಕಿದರು.