ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮೂರು ಹಸುಗಳನ್ನು ನೀಡಿದ್ದಾರೆ.
ಬೆಂಗಳೂರಿನ ವಿನಾಯಕನಗರದಲ್ಲಿ ರಾತ್ರೋರಾತ್ರಿ ರಸ್ತೆಯ ಪಕ್ಕದಲ್ಲಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಹಸುವಿನ ಮಾಲೀಕ ಕರ್ಣ ಮನೆಗೆ ಭೇಟಿ ನೀಡಿ ಸಮಾಧಾನ ಮಾಡಿದ್ದಲ್ಲದೇ ಮೂರು ಹಸುಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು.
ಈ ಹಿನ್ನೆಲೆಯಲ್ಲಿಂದು ಅವರ ಮನೆಗೆ ಭೇಟಿ ನೀಡಿದ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಮೂರು ಲಕ್ಷ ರೂ ವೆಚ್ಚದಲ್ಲಿ ಹಸುಗಳನ್ನು ಖರೀದಿಸಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಹಸುವಿನ ಮಾಲೀಕ ಕರ್ಣ ಅವರ ಸಹೋದರಿ ಅಮುದಾ ಅವರು, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆಯ ಮನಸ್ಸಿನಿಂದ ಹಸುಗಳನ್ನು ಕೊಡಿಸಿದ್ದಾರೆ. ಕೆಲವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರು ಜೊತೆ ಇದ್ದೇವೆ ಎಂದು ಹೇಳಿದರು.