ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು
ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ ಪುಸ್ತಕ ಇಂದು ಬಿಡುಗಡೆ
ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ, ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಎಸ್.ಎಲ, ದಕ್ಷಿಣ ಸೂಡನ್ ನಲ್ಲಿ ವಿಶ್ವಸಂಸ್ಥೆ ಶಾಂತಿ ಪಾಲನೆ ಪಡೆಯ ಅಧಿಕಾರಿಯಾಗಿ ಕೋವಿಡ್ ಸಂದರ್ಭ ೧ ವರ್ಷ ೩ ತಿಂಗಳು ಸೇವೆ ಅವಧಿಯ ಅಪರೂಪದ ಅನುಭವವನ್ನು ಆಧರಿಸಿ ಬರೆದಿರುವ ಅನುಭವ ಕಥನ ‘ಅಲ್ಕೆಬುಲಾನದ ಹೃದಯದಿಂದ’.
ಈ ಅವಧಿಯಲ್ಲಿ ಲೇಖಕರು ತಾವು ಕಂಡ ಜನಾಂಗೀಯ ಸಂಘರ್ಷ, ಆಫ್ರಿಕಾದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ರಜತಾಂತ್ರಿಕ ಸೇರಿದಂತೆ ಹಲವಾರು ಮಗ್ಗುಲುಗಳನ್ನು ಅತ್ಯಂತ ತನಿಖಾತ್ಮಕ ಮತ್ತು ಪ್ರಾಮಾಣಿಕ ದೃಷ್ಟಿಕೋನದಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಗೋಚರಿಸಿದ್ದನ್ನು, ಮನಸ್ಸಿಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ದಾಖಲಿಸುತ್ತಾ, ಕೌಶಲಗಳನ್ನು ಒರೆಗೆ ಹಚ್ಚಿ ಪ್ರಕರಣ ಒಂದನ್ನು ಗಂಭೀರ ತನಿಖೆ ಮಾಡುವ ಪೊಲೀಸ್ ಮಾದರಿಯ ಈ ಕೃತಿಯನ್ನು ರಚಿಸಿದ್ದಾರೆ.
ಮನುಷ್ಯ ಸಂಕುಲದ ತಾಯ್ನಾಡು ಆಫ್ರಿಕ. ಅರೇಬಿಕ್‌ನಲ್ಲಿ ಅಲ್ಕೆಬುಲಾನ್ ಅಂದರೆ ಕಪ್ಪು ವರ್ಣಿಯರ ನೆಲ ಎಂದರ್ಥ. ವಿಶ್ವದ ಎರಡನೇ ಅತ್ಯಂತ ದೊಡ್ಡ ನೈಲ್ ನದಿ ಈ ದೇಶವನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಇಲ್ಲಿ ಆಂತರಿಕ ಶಾಂತಿ ಮತ್ತು ಭದ್ರತೆ ಮತ್ತು ಅಭಿವೃದ್ಧಿ ಖಾಯಂಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಶ್ರಮಿಸುತ್ತಿದೆ. ಈ ಸಲುವಾಗಿ ಹಲವಾರು ಹಂತದಲ್ಲಿ ಕಠಿಣ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಹೀಗೆ, ೨೦೧೮ ರಲ್ಲಿ ೧೬೫ ಅಧಿಕಾರಿಗಳನ್ನು ಸದರಿ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದಿಂದ ೬ ಪೊಲೀಸ್ ಅಧಿಕಾರಿಗಳು ಆಯ್ಕೆಯಾಗುತ್ತಾರೆ. ಅವರಲ್ಲಿ ಒಬ್ಬರು ಐಪಿಎಸ್ ಅಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಅವರು. ಶಾಂತಿಪಾಲನ ಮಿಷನ್‌ನ ಅರ್ಹತಾ ಪರೀಕ್ಷೆಗಳಿಂದ ಹಿಡಿದು ಆಫ್ರಿಕಾ ಅನಿಲದ ಎಬೊಲ ವೈರಸ್ ಭೀತಿ, ಸೋಮಾಲಿಯಾದ ಕಡಲ್ಗಳ್ಳರ ಮಾಫಿಯಾ, ಜೀವ ವೈವಿಧ್ಯತೆ ಹಾಗೂ ಅಲ್ಲಿನ ಬುಡಕಟ್ಟು ಜನರ ವಿಶಿಷ್ಟ ಜೀವನ ಕ್ರಮದವರೆಗೆ ಹಲವು ರೋಚಕ ಸಂಗತಿಗಳನ್ನು ಓದುಗರ ಮುಂದಿಟ್ಟಿದ್ದಾರೆ. ವಿಶ್ವಸಂಸ್ಥೆಯ ಶಾಂತಿಧೂತ ಅಧಿಕಾರಿಯಾಗಿ ಆಯ್ಕೆಯಾಗಲು ಬೇಕಾದ ಅರ್ಹತೆ ಮತ್ತು ಪರೀಕ್ಷೆ ಬಗ್ಗೆ ಪರಿಚಯ ಮಾಡುವ ಮೂಲಕ ಆರಂಭವಾಗುವ ಕಥನವು ದಕ್ಷಿಣ ಸುಡಾನ್ ದೇಶದ ಹಲವು ತೆರನಾದ ವಿಷಯಗಳ ಸವಿವರ ಪರಿಚಯ ಮಾಡಿಸುತ್ತದೆ.
ಆ ದೇಶಕ್ಕೆ ತೆರಳಲು ಲಸಿಕೆ ಪಡೆಯಬೇಕಾದ ಅವಶ್ಯಕತೆ ಬಗ್ಗೆ ಮಾತನಾಡುವಾಗ ಕಾಂಗೋ ದೇಶದಲ್ಲಿ ಇರುವ ಎಬೋಲಾ ಎಂಬ ಮಾರಣಾಂತಿಕ ವೈರಸ್ ಹೇಗೆ ವ್ಯಕ್ತಿಯ ಬೆವರು, ಮೂತ್ರ ಮತ್ತು ಬಹಿರ್ದಿಸೆ ಸಂಪರ್ಕಕ್ಕೆ ಬರುವವರಿಗೆ ಹರಡುವ ಸಾಧ್ಯತೆ ಇದೆ, ಅದು ಮಾನವ ದೇಹ ಸೇರಿದಾಗ ರೋಗಿ ಹೇಗೆ ಕೆಲವು ದಿನಗಳಲ್ಲಿಯೇ ಉಸಿರು ಚೆಲ್ಲುತ್ತಾನೆ ಎಂಬುದರ ಕುರಿತು ಮಾತನಾಡುತ್ತಲೇ, ಆಫ್ರಿಕಾ ಖಂಡದಲ್ಲಿ ಕಂಡುಬರುವ ಜೀವ ವೈವಿಧ್ಯ, ಜನಾಂಗೀಯ ದ್ವೇಷ, ಸಾಮಾನ್ಯ ಜನರ ಬದುಕು, ವಿಶೇಷವಾದ ಜಾನಪದ ಸಂಸ್ಕೃತಿ ಮುಂತಾದ ಆಸಕ್ತಿದಾಯಕ ವಿಷಯಗಳ ಪರಿಚಯ ನೀಡುತ್ತದೆ.
ಸಮುದ್ರದಲ್ಲಿ ಮೀನು ಹಿಡಿದು ಬದುಕು ಹಸನು ಮಾಡಿಕೊಳ್ಳುತ್ತಿದ್ದ ಸೋಮಾಲಿಯಾದ ಜನ, ಮತ್ಸ್ಯ ಕ್ಷಾಮದಿಂದ ಕಾರ್ಗೋ ಹಡಗುಗಳನ್ನು ವಶಕ್ಕೆ ಪಡೆದು ಲೂಟಿ ಮಾಡುವ ಮತ್ತು ಹಡಗಿನ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಹಣ ಪಡೆಯುವ ಕೆಟ್ಟ ಮಾಫಿಯಾ ಆಗುತ್ತಿರುವ ಬಗ್ಗೆ ಹೇಳುತ್ತಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಅಪರಾಧ ಜಗತ್ತನ್ನು ಅನಾವರಣಗೊಳಿಸುತ್ತದೆ. ಹೀಗೆ ಆಸಕ್ತಿದಾಯಕವಾಗಿ ಆರಂಭವಾಗುವ ಅನುಭವ ಕಥನ, ಆಫ್ರಿಕಾ ನೆಲದಲ್ಲಿ ಲೇಖಕರಿಗೆ ಪರಿಚಯವಾಗುವ ವ್ಯಕ್ತಿಗಳನ್ನು ಓದುಗರಿಗೆ ಪರಿಚಯಿಸುತ್ತ, ಜನರ ಬದುಕಿನ ಜತೆಗೆ ಮಿಳಿತವಾಗಿರುವ ಭಾಷೆ, ಸಂಸ್ಕೃತಿ, ಜೀವನ ಶೈಲಿ ಹಾಗೂ ಇನ್ನಿತರ ಸಂಕೀರ್ಣ ವಿಷಯಗಳ ಕುರಿತ ಗಂಭೀರ ವಿಚಾರಗಳಿವೆ. ಲೇಖಕರಿಗೆ ಮೊದಲು ಪರಿಚಯವಾಗುವ ಸ್ಥಳೀಯ ವ್ಯಕ್ತಿ ಮಿಸ್ಟರ್ ಕಿನಿಯೇ. ಕುಕು ಬುಡಕಟ್ಟಿನವನು.. ಈ ಜನ ಮಳೆ ನಿಯಂತ್ರಿಸುವವರು ಎಂಬ ನಂಬಿಕೆ ಇದೆ. ಹಾಗೆಯೇ, ಇಲ್ಲಿ ವಧುದಕ್ಷಿಣೆ ಪದ್ಧತಿ ಆಚರಣೆಯಲ್ಲಿದೆ. ಗಂಡಿನ ಮನೆಯವರು ಕನಿಷ್ಠ ೫೦ ರಿಂದ ೧ ಸಾವಿರ ಹಸುಗಳನ್ನು ವಧುದಕ್ಷಿಣೆಯಾಗಿ ನೀಡುತ್ತಾರೆ.
ಹೀಗೆ ಬುಡಕಟ್ಟು ಸಂಸ್ಕೃತಿಯ ಬಗ್ಗೆ ಹೇಳುತ್ತಾ, ರಾಜಧಾನಿ ಜುಬ ಪಟ್ಟಣವನ್ನು ಹೊರತುಪಡಿಸಿದರೆ ಇನ್ನೆಲ್ಲೂ ರಸ್ತೆಗಳಿಗೆ ಟಾರು ಇಲ್ಲದ್ದು, ಹಾಗೂ ಇಲ್ಲಿನ ಬುಡಕಟ್ಟು ಸಂಗೀತ ಉಖಿಸುತ್ತಾ, ಆಫ್ರಿಕಾದ ರಿಗ್ಗಿ ಸಂಗೀತದ ಪ್ರವರ್ತಕ ಜಮೈಕಾದ ಬಾಬ್ ಮಾರ್ಲೆ ಅನ್ನು ಉಖಿಸಲಾಗಿದೆ. ಅಲ್ಲಿನ ಜನರಿಗೆ -ಟ್ಬಾಲ್ ಕ್ರೀಡೆಯ ಬಗ್ಗೆ ಇರುವ ಅತಿಯಾದ ಆಸಕ್ತಿ ಮತ್ತು ಮಹಿಳೆಯರ ಉಡುಪು ಅವರ ಸಂಸ್ಕೃತಿ ಕುರಿತು ಹೇಳುತ್ತಾರೆ. ದಕ್ಷಿಣ ಸೂಡಾನ್‌ನ ಮಿಲಿಟರಿ ತಂಡ ಜೂಬಾ ನಗರ ಪ್ರವೇಶಿಸುವಾಗ ಲೇಖಕರು ಎದುರುಗೊಳ್ಳುತ್ತಾರೆ. ಆಗ ಅವರ ಸಹೋದ್ಯೋಗಿ ನೈಜಿರಿಯಾದ ಜೋಸೆಫೀನ್ ಅವರು ಅವರ ಕಡೆ ನೋಡಬೇಡ…! ಅವರು ಯುದ್ಧ ಭೂಮಿಯಿಂದ ನೇರವಾಗಿ ಬಂದಂತಿದ್ದಾರೆ ಎಂದು ಎಚ್ಚರಿಸುತ್ತಾರೆ.
ಕಾರಣ: ನೈಜಿರಿಯದಲ್ಲಿ ತನ್ನ ತಾಯಿಗೆ ಕೃಷಿಯಲ್ಲಿ ಸಹಾಯ ಮಾಡುವಾಗ ಬಂದೂಕು ದಾರಿಗಳಿಂದ ಅನುಭವಿಸುವ ಕರಾಳ ಸಂದರ್ಭ ನೆನೆದು ಹೇಳುತ್ತಾರೆ… ಅಧಿಕಾರಿ ಹೆಸರು ರಾಮಾಯಣ. ಆತ ನೇಪಾಳಿ. ಅಲ್ಲಿನವರು ಭಾರತೀಯರಿಗಿಂತಲೂ ಹೆಚ್ಚು ಧಾರ್ಮಿಕರು. ಹಾಗಾಗಿ ಅವರ ಹೆಸರು ಧರ್ಮಕೇಂದ್ರಿತ ಎಂಬುದನ್ನು ಇಲ್ಲಿ ಕಾಣುತ್ತೇವೆ. ಹಾಗೆಯೇ ಫಿಜಿ ದೇಶ ಕೂಡ. ಸಹೋದ್ಯೋಗಿ ಕಮಲೇಶಿನಿ ದೇವಿಕಾ ನಾರಾಯಣ ಎಂಬವರು ಮೂಲ ಭಾರತೀಯರು. ಅವರು ಪೊಲೀಸ್ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿರುವ ಮಹಿಳೆ. ಅವರ ಮೂಲಕ ಫಿಜಿ-ಭಾರತೀಯರ ಮೂಲ ಮತ್ತು ಅವರ ದುಸ್ತರವಾದ ಬದುಕನ್ನು ಅನಾವರಣ ಮಾಡುತ್ತಾರೆ. ಜೊತೆಗೆ ಇಲ್ಲಿನ ಜೀವವೈವಿಧ್ಯತೆ ಕೂಡ ಇಲ್ಲಿ ಸ್ಥಾನ ಪಡೆದುಕೊಂಡಿದೆ. ಉದಾಹರಣೆಗೆ ಡ್ರೈವರ ಇರುವೆಗಳು. ಇವು ಒಂದು ಬಾರಿ ಆಹಾರ ಹುಡುಕಿಕೊಂಡು ಹೊರಟರೆ ರಸ್ತೆ ಮಧ್ಯೆ ಸಿಗುವ ಯಾವುದೇ ಪ್ರಾಣಿಯನ್ನೂ ಲೆಕ್ಕಿಸದೆ ಮುಗಿಸಿಬಿಡುತ್ತವೆ. ಆದ್ದರಿಂದ ಇಲ್ಲಿನ ಜನ ತಮ್ಮ ದನ ಕರುಗಳನ್ನು ಕಟ್ಟಿ ಹಾಕುವುದಿಲ್ಲ.
ಭಾರತದಿಂದ ಒಂದು ಶತಮಾನದ ಹಿಂದೆ ವಲಸೆ ಹೋದ ಗಿರಮಿತಿಯಗಳು, ಅಲ್ಲಿ ಅಂತಜತಿ ವಿವಾಹವಾಗಿ ಹೊಸ ಸಮಾಜವನ್ನೇ ಕಟ್ಟಿಕೊಂಡು ತಾಯ್ನಾಡಿನ ಹೊಕ್ಕಳು ಬಳ್ಳಿ ಕಳೆದುಕೊಂಡು ಅತಂತ್ರರಾಗಿ ಬದುಕುತ್ತಿರುವ ಉದಾಹರಣೆ ನಮಗೆ ಸಿಗುತ್ತದೆ.
ಹಲವಾರು ಜನಾಂಗ, ಮೂಲ ಸಂಸ್ಕೃತಿ ಬಗ್ಗೆ ಮಾತನಾಡುತ್ತಲೇ,ಆರ್ಥಿಕತೆ ಬಗ್ಗೆ ದೃಷ್ಟಿ ಹರಿಸುತ್ತಾರೆ. ಜಿಂಬಾಬ್ವೆ ದೇಶದಲ್ಲಿ ಆಡಳಿತದಲ್ಲಿನ ಭ್ರಷ್ಟಾಚಾರ ಕಾರಣದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿ ಡಾಲರ್ ಮೌಲ್ಯ ಕುಸಿದು ಬಡತನ ಉಂಟಾಗುತ್ತದೆ. ಯಾವ ಮಟ್ಟಿಗೆ ಎಂದರೆ: ತಾಯಂದಿರು ಮಕ್ಕಳಿಗೆ ಹಾಲಿನ ಬದಲು ಸೋಯಾ ಹಾಲಿನ ಪೌಡರನ್ನು ನೀರಿನಲ್ಲಿ ಕಲಸಿ ನೀಡುವ, ಕೃಷಿ ಮಾಡಲು ರೈತರಿಗೆ ಬೀಜ ಕೊಡಲು ಆಗದೇ ಇರುವವರೆಗೆ… ಲೇಖಕರ ಸಹೋದ್ಯೋಗಿ ಜಿಂಬಾಬ್ವೆಯ ಇನ್ಸ್‌ಪೆಕ್ಟರ್ ದರ್ಜೆ ಅಧಿಕಾರಿಯೊಬ್ಬರು ಹೇಳುವಂತೆ, ತನ್ನ ಸಂಬಳದಿಂದ ಬದುಕನ್ನು ಸರಿದೂಗಿಸಲು ಸಾಧ್ಯವಾಗದೆ ಮನೆಯಲ್ಲಿ ಬ್ರೆಡ್ ತಯಾರಿಸಿ, ತರಕಾರಿ ಪ್ಯಾಕ್ ಮಾಡಿ, ಮಾರಾಟ ಮಾಡಿ ಸಂಸಾರ ತೂಗಿಸುವ ಮಟ್ಟಿಗೆ ದುಸ್ತರ ಬದುಕು ಉಂಟಾಗುತ್ತದೆ… ಮುಂದುವರಿದು ಅಂತರ್ ಯುದ್ಧದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ದಕ್ಷಿಣ ಸೂಡಾನಿಗಳು ಈ ಹೊತ್ತಿಗೂ ಬದುಕುತ್ತಿರುವುದು ವಿಶ್ವಸಂಸ್ಥೆ ನೀಡುತ್ತಿರುವ ಮಾನವೀಯ ನೆರವಿನಿಂದ.
ಆಫ್ರಿಕಾದ ಹಲವಾರು ದೇಶಗಳ ಆರ್ಥಿಕ ಸ್ಥಿತಿ ಗತಿಗೆ ಕನ್ನಡಿ ಇವೆ ಘಟನೆಗಳು. ಇದರ ಜೊತೆಗೆ ಭಾರತೀಯ ಮೂಲದ ಹಲವಾರು ಜನ ಉದ್ಯಮ ಸ್ಥಾಪಿಸಿ ಆ ಕಷ್ಟದಲ್ಲಯೂ ತಮ್ಮ ಬದುಕನ್ನು ಹಸನುಗುಡಿಸಿ ಕೊಂಡಿದ್ದಾರೆ ಎಂಬ ಹಲವಾರು ನಿದರ್ಶನಗಳನ್ನು ಲೇಖಕರು ತಾವು ಭೇಟಿ ಮಾಡಿದ ಹಲವಾರು ಜನರ ಬದುಕನ್ನು ಪರಿಚಯಿಸುವುದರ ಮೂಲಕ ಓದುಗರಿಗೆ ಹೇಳಿದ್ದಾರೆ.
ಹೀಗೆ ಹಲವಾರು ವಿಷಯಗಳ ಬಗ್ಗೆ ಒಂದಿಂದು ಮಾಹಿತಿಯನ್ನು ತಮ್ಮ ಅನುಭವ ಜನ್ಯ ಮಾತುಗಳಿಂದ ಹೆಕ್ಕಿ ತೆಗೆದಿರುವ ಲೇಖಕರು ನಿಖರವಾಗಿ ಮತ್ತು ಸರಳವಾಗಿ ಕನ್ನಡದ ಓದುಗರಿಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಲೇಖಕರ ಪರಿಚಯ: ಎಸ್.ಎಲ್. ಚನ್ನಬಸವಣ್ಣ ಐಪಿಎಸ್ ಅವರು ಪ್ರಸ್ತುತ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ)ಯ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ಜಿಯ ರಾಮದುರ್ಗದವರಾದ ಇವರು, ಪಿಯುಸಿ (ಕಲಾ ವಿಭಾಗ)ಯಲ್ಲಿ ರಾಜ್ಯಕ್ಕೆ ೨ನೇ ರಾಂಕ್ ಪಡೆದಿದ್ದು, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಪರಾಧಶಾಸ ಮತ್ತು ವಿಧಿವಿಜ್ಞಾನ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ. ಪದವಿ ಪಡೆದಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿ ಎಂ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದ್ದಾರೆ.
ಮಂಡ್ಯ, ಮಂಗಳೂರು ಬೆಳಗಾವಿ, ಬೀದರ್ ಹಾಗೂ ಉಡುಪಿ ಕರಾವಳಿ ಕಾವಲುಪಡೆ (ಎಸ್‌ಪಿ) ಸೇರಿದಂತೆ ವಿವಿಧ ಜಿಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು, ವಿಶ್ವಸಂಸ್ಥೆ ಶಾಂತಿಪಾಲನೆ ಪದಕ, ಕೇಂದ್ರ ಗೃಹ ಸಚಿವರ ತನಿಖಾ ಶ್ರೇಷ್ಠತಾ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಮುಖ್ಯಮಂತ್ರಿಗಳ ಖಡ್ಗ ಗೌರವ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿzರೆ. ರಾಜ್ಯಪಾಲರ ಮೆಚ್ಚುಗೆ ಪತ್ರ ಮತ್ತು ೫೬ಕ್ಕೂ ಹೆಚ್ಚು ವೃತ್ತಿಪರ ಪ್ರಶಂಸೆಗಳನ್ನು ಪಡೆದಿzರೆ. ಉನ್ನತ ಪೊಲೀಸ್ ಅಧಿಕಾರಿಯಷ್ಟೇ ಅಲ್ಲದೆ, ಈ ಪ್ರವಾಸ ಕಥನದ ಮೂಲಕ ಭೌಗೋಳಿಕ, ಸಾಂಸ್ಕೃತಿಕ ಮತ್ತು ಮಾನವೀಯ ಅನುಭವಗಳನ್ನು ಓದುಗರಿಗೆ ಪರಿಚಯಿಸುವ ಸಂವೇದನಾಶೀಲ ಲೇಖಕ…
ನಗರ ಗ್ರಂಥಾಲಯದಲ್ಲಿ ಸಮಾರಂಭ ಈ ಪುಸ್ತಕ ಬಿಡುಗಡೆ ಸಮಾರಂಭವು ಮೈಸೂರಿನ ಪೀಪಲ್ಸ್ ಪಾರ್ಕ್ ಬಳಿಯ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ೫.೩೦ಕ್ಕೆ ನಡೆಯಲಿದೆ.
” ಇಲ್ಲಿ ಸಿಗುವ ಬೇಸಿಕ್ ಹಾಗೂ ವಿರಳವಾಗಿ ಕಾಣಿಸಿಗುವ ಆಂಡ್ರಾಯ್ಡ ಫೋನ್‌ಗಳು ಹೇಗೆ ಯುವಕರ ಬದುಕನ್ನು ಆಪೋಷನ ತೆಗೆದುಕೊಂಡು ಸೋಮಾರಿಗಳನ್ನಾಗಿಸಿದೆ ಎಂಬ ನಿದರ್ಶನಗಳು ಇಲ್ಲಿ ಬಿತ್ತರವಾಗಿವೆ.”




