ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ) ಅವರನ್ನು ಬಂಧಿಸಲಾಗಿದೆ.
ಮನ್ ಮುಲ್ ಹಾಲಿನ ಪುಡಿಯಲ್ಲಿ ಕಲಬೆರಕೆ ನಡೆದಿರೋದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಈ ಕೇಸ್ ಸಂಬಂಧ ಇದೀಗ ಮನ್ಮುಲ್ ಮಾಜಿ ಅಧ್ಯಕ್ಷ ಶಿವಕುಮಾರ್ ಅವರನ್ನ ಬಂಧನ ಮಾಡಲಾಗಿದ್ದು, ಶಿವಕುಮಾರ್ ಅವರು ಮದ್ದೂರು ಠಾಣೆಗೆ ಖುದ್ದು ಬಂದು ಶರಣಾಗಿದ್ದಾರೆ.
ಶಿವಕುಮಾರ್ ಮನ್ ಮುಲ್ನಲ್ಲಿ ಹಾಲಿನ ಪುಡಿ ಕಲಬೆರೆಕೆ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಕುಮಾರ್ ಆರೋಪಿಯಾಗಿದ್ದು, ಉಪಲೋಕಾಯಕ್ತರಿಂದ ಸುಮೊಟೋ ಕೇಸ್ ದಾಖಲಾಗಿದೆ. ಜಾಮೀನು ಅರ್ಜಿ ತಿರಸ್ಕೃತವಾಗುತ್ತಿದ್ದಂತೆ ಠಾಣೆಗೆ ಬಂದು ಅವರು ಶರಣಾಗಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಮದ್ದೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶಿವಕುಮಾರ್ ಅವರು ಎಂ.ಎಲ್.ಎ ಟಿಕೆಟ್ ಆಕಾಂಕ್ಷಿಯಾಗಿದ್ದು, ಕಳೆದ ಬಾರಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ಅಂತಿಮ ಕ್ಷಣದಲ್ಲಿ ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಟಿಕೆಟ್ ಕೈತಪ್ಪಿದ ಹಿನ್ನೆಲೆ ಶಿವಕುಮಾರ್ ಅವರನ್ನು ಪಕ್ಷ ಮನ್ಮುಲ್ ಅಧ್ಯಕ್ಷನನ್ನಾಗಿ ಮಾಡಿತ್ತು.
ಏನಿದು ಕಲಬೆರಕೆ ಕೇಸ್?:
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮಲ್)ಕ್ಕೆ ಸೇರಿದ ಕೆನೆ ರಹಿತ ಹಾಲಿನ ಪುಡಿ ದಾಸ್ತಾನು ಮಾಡಲಾಗಿದ್ದ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಮೆ.ಮಾಸ್ಟರ್ ಇಲ್ಯೂಷನ್ ಐಎನ್‌ಸಿಯ 1ನೇ ಗೋದಾಮಿನಲ್ಲಿ ಹಾಲಿನ ಪುಡಿ ಕಲಬೆರಕೆ ಹಾಗೂ ಹಣ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಮನ್‌ಮುಲ್ ಮೆಗಾ ಡೇರಿಯಲ್ಲಿ 46 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕವಿದ್ದು, ಹಾಲಿನ ಪುಡಿ ಘಟಕದಿಂದ ಪ್ರತಿದಿನ ಅಂದಾಜು 25 ರಿಂದ 30 ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದನೆ ಮಾಡಲಾಗುತ್ತಿದೆ.
ವಾರ್ಷಿಕವಾಗಿ ಸರಾಸರಿ ಅಂದಾಜು 3ಸಾವಿರ ಮೆಟ್ರಿಕ್ ಟನ್ ಕೆನೆಭರಿತ ಹಾಗೂ ಅಂದಾಜು 7.5 ರಿಂದ 8 ಸಾವಿರ ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ಉತ್ಪಾದನೆ ಮಾಡಲಾಗುತ್ತಿದೆ.
ನಂತರದ ದಿನಗಳಲ್ಲಿ ವಾಹನಕ್ಕೆ ಲೋಡ್ ಮಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದಾಗ ದಾಸ್ತಾನು ಚೀಲಗಳ ಮೇಲೆ ಒಕ್ಕೂಟದ ಹೆಸರು ಮುದ್ರಣವಿಲ್ಲದ ಚೀಲಗಳು ಹಾಗೂ ದಾಸ್ತಾನಿನಲ್ಲಿ ಹಲವು ಮೆಟ್ರಿಕ್ ಟನ್‌ನಷ್ಟು ಹಾಲಿನಲ್ಲಿ ಪುಡಿ ಕಡಿಮೆ ಇರುವುದು ಕಂಡು ಬಂದಿತ್ತು. ಅದರಂತೆ ಗೋದಾಮಿನ ಮಾಲೀಕರು ಕಡಿಮೆ ಬಂದ ಹಾಲಿನಪುಡಿ ನೀಡುವುದಾಗಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ.




