ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ನಾಳೆ ಸಂವಿಧಾನ ದಿನ ಆಚರಣೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರತಿ ವರ್ಷದಂತೆ ಪ್ರಸಕ್ತ ನವೆಂಬರ್.26ರಂದು ಸಂವಿಧಾನ ದಿನವನ್ನು ಆಚರಿಸುವಂತೆ ಹಾಗೂ ಈ ಸಂದರ್ಭದಲ್ಲಿ ಎಲ್ಲರಿಗೂ ನಮ್ಮ ಸಾಂವಿಧಾನಿಕ ಮೌಲ್ಯಗಳನ್ನು ಬಿತ್ತರಿಸುವುದು, ಈ ರಾಷ್ಟ್ರೀಯ ಆಚರಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜುಗಳು, ಸಂಸ್ಥೆಗಳು, ಸ್ನಾಯತ್ತ ಸಂಸ್ಥೆಗಳು ಸೇರಿದಂತೆ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ನಾಳೆ ಸಾಮೂಹಿಕವಾಗಿ ಓದುವುದರ ಮೂಲಕ ಹಾಗೂ ಸಂವಿಧಾನದ ಮೌಲ್ಯಗಳು, ಮೂಲ ಆಶಯಗಳ ಬಗ್ಗೆ ಚರ್ಚೆ, ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.





