Mysore
30
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಮುಡಾ ಹಗರಣ| ನನ್ನ ಪತ್ನಿಗೆ ಇ.ಡಿ. ನೋಟಿಸ್‌ ನೀಡಿರುವುದು ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಸಂಸ್ಥೆಯೂ ನನ್ನ ಪತ್ನಿ ಪಾರ್ವತಿ ಅವರಿಗೆ ನೋಟಿಸ್‌ ಜಾರಿ ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ. ಆದರೆ ನಮಗೆ ನ್ಯಾಯಾಲಯದಿಂದ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು(ಜನವರಿ.28) ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಹಗರಣದಲ್ಲಿ ಇ.ಡಿ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿರುವುದು ರಾಜಕೀಯ ಪ್ರೇರಿತವಲ್ಲದೇ ಮತ್ತೇನು? ಮುಡಾ ಹಗರಣವೇ ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ನನ್ನ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅನ್ವಯ ವಿಚಾರಣೆ ನಡೆಸಿದ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದರು.

ಮುಡಾ ಹಗರಣದ ಬಗ್ಗೆ ಯಾಕಿಷ್ಟು ಆತುರ ಮಾಡುತ್ತಿದ್ದೀರಾ? ಅದರ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಅಲ್ಲದೇ ಹೈಕೋರ್ಟ್‌ ನಿನ್ನೆ(ಜನವರಿ.27) ಸಿಬಿಐಗೆ ನೀಡಬೇಕಾ? ಅಥವಾ ಬೇಡವಾ? ಎನ್ನುವ ಬಗ್ಗೆ ಚರ್ಚೆ ಆಗುತ್ತಿದ್ದು, ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದೆ. ಹೀಗಿರುವಾಗ ಆತುರ ಮಾಡುವುದು ಸರಿಯಲ್ಲ. ಆದರೆ ನನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಮರ್ಥನೆ

ಇದೇ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕುಂಭಮೇಳದಲ್ಲಿ ಸ್ನಾನ ಮಾಡಿದ್ರೆ ಬಡತನ ನಿರ್ಮೂಲನೆ ಆಗುತ್ತಾ ಎಂದು ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯ ಅವರು, ಕುಂಭ ಸ್ನಾನದ ಕುರಿತು ಮಲ್ಲಿಕಾರ್ಜುನ ಖರ್ಗೆ ನೀಡಿರೋ ಹೇಳಿಕೆ ಬಗ್ಗೆ ಅವರನ್ನೇ ಕೇಳಿ. ಆದರೆ ಈ ವಿಚಾರದಲ್ಲಿ ನನ್ನ ಅಭಿಪ್ರಾಯದಂತೆ ಇದು ನಮ್ಮ ಸಂಪ್ರದಾಯ ಅಷ್ಟೇ ಎಂದರು.

ಕುಂಭಮೇಳದಲ್ಲಿ ಸ್ನಾನ ಮಾಡೋರು, ಗಂಗೆಯಲ್ಲಿ ಸ್ನಾನ ಮಾಡೋದು ಪಾಪ ಪರಿಹಾರ ಆಗುತ್ತೆ ಎನ್ನುವ ನಂಬಿಕೆ ಇದೆ. ಆದರೆ ನಾವೆಲ್ಲ ಬಸವಣ್ಣನವರ ಅನುಯಾಯಿಗಳು. ಪಾಪ, ಪುಣ್ಯ ಎಲ್ಲಾ ಹೆಂಗೆ? ಅಯ್ಯಾ ಎಂದರೆ ಸ್ವರ್ಗ… ಎಲವೋ ಎಂದರೆ ನರಕ ಅನ್ನೋದರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ ಎನ್ನುವ ಮೂಲಕ ಖರ್ಗೆ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

Tags: