ಬೆಂಗಳೂರು : ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ, ಬ್ರಿಟಿಷರ ಜೊತೆ ಶಾಮೀಲಾಗಿದ್ದ ಆರ್‍ಎಸ್‍ಎಸ್ ಮತ್ತು ಬಿಜೆಪಿಯವರು ದೇಶ ಪ್ರೇಮದ ಬಗ್ಗೆ ಢೋಂಗಿ ಭಾಷಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಕೆಪಿಸಿಸಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯಸರಣೆ, ಸರ್ದಾರ್‍ವಲ್ಲಭಬಾಯಿ ಪಟೇಲ್ ಅವರ ಜನ್ಮಾದಿನಾಚರಣೆಯಲ್ಲಿ ಪ್ರಯುಕ್ತ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ.ಇಂದಿರಾಗಾಂಧಿ ಅವರು ದೇಶದ ಉಕ್ಕಿನ ಮಹಿಳೆ ಎಂದು ಹೆಸರು ಪಡೆದಿದ್ದರು. ಬಾಂಗ್ಲಾ ವಿಮೋಚನೆ ಬಳಿಕ ಆಗಿನ ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂಧಿರಾಗಾಂಧಿ ಅವರನ್ನು ದುರ್ಗೆ ಎಂದು ಸಂಸತ್‍ನಲ್ಲೇ ಕರೆದಿದ್ದರು ಎಂದರು.
ದೇಶಕ್ಕೆ 20 ಅಂಶಗಳ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೇಸ್
ದೇಶದಲ್ಲಿ ಇಂದಿರಾಗಾಂಧಿ ಅವರು ದೀರ್ಘಕಾಲ ಪ್ರಧಾನಿಯಾಗಿ ಆಡಳಿತ ನಡೆಸಿದರು ಗರೀಭಿ ಹಟವೋ ಎಂಬ ಘೋಷಣೆಯನ್ನು ಜಾರಿಗೆ ತರುವ ಪ್ರಯತ್ನ ಮಾಡಿದರು. ಸಮಾನತೆಗಾಗಿ ಪ್ರಯತ್ನಿಸಿದರು. 20 ಅಂಶಗಳ ಕಾರ್ಯಕ್ರಮದ ಮೂಲಕ ನೆಹರೂ ಕಾಲದಿಂದಲೂ ಸರ್ವವರಿಗೂ ಸಮಾನ ಅವಕಾಶ ಕಲ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಾ ಬಂದಿದೆ.
ಅಕ್ಷರ ಸಂಸ್ಕೃತಿಯಿಂದ ಮಹಿಳೆಯರು, ಶೂದ್ರರು ವಂಚಿತರಾಗಿದ್ದರಿಂದ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಿದೆ. ಚಾತುವರ್ಣ ವ್ಯವಸ್ಥೆಯಲ್ಲಿ ಶೂದ್ರವರ್ಗಕ್ಕೆ ಅವಕಾಶಗಳೇ ಇರಲಿಲ್ಲ. ಮೇಲ್ವರ್ಗದಲ್ಲಿನ ಹೆಣ್ಣು ಮಕ್ಕಳಿಗೂ ವಿದ್ಯೆಯನ್ನು ವಂಚಿಸಲಾಗಿತ್ತು. 12ನೇ ಶತಮಾನದಲ್ಲಿ ಬಸವಣ್ಣ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿದರು. ಬಸವಣ್ಣನ ಸಾಮಾಜಿಕ ಕ್ರಾಂತಿ ಮೇಲ್ವರ್ಗಕ್ಕಲ್ಲ, ಕೆಳ ವರ್ಗದವರಿಗಾಗಿ ನಡೆಯಿತು ಎಂದರು.
ಬಸವಣ್ಣರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ್ದು ಕಾಂಗ್ರೆಸ್
ತಮ್ಮ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬೇರೆ ಪಕ್ಷದವರು ಈ ಕೆಲಸ ಮಾಡಿರಲಿಲ್ಲ. ಕೇವಲ ಬುರುಡೆ ಹೊಡೆಯುತ್ತಿದ್ದರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣ ನವರ ಭಾವಚಿತ್ರ ಹಾಕಲು ನಮ್ಮ ಸರ್ಕಾರ ಆದೇಶ ಮಾಡಿತ್ತು ಎಂದು ಸ್ಮರಿಸಿಕೊಂಡರು.
ಇದನ್ನು ಓದಿ: ನ.2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ ಆರ್‌ಎಸ್‌ಎಸ್‌ಗೆ ಹಿನ್ನಡೆ
ಇಂದಿರಾಗಾಂಧಿ ಅವರನ್ನು ಸ್ಮರಿಸಿಕೊಳ್ಳುವ ಜೊತೆಗೆ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು. ಈ ಮೂಲಕ ಇಂದಿರಾಗಾಂಧಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು. ಸರ್ದಾರ್ ವಲ್ಲಭ ಬಾಯಿ ಪಟೇಲ್ ದೇಶದ ಉಪ ಪ್ರಧಾನಿಯಾಗಿದ್ದರು. ಸ್ವಾತಂತ್ರ್ಯ ನಂತರ ದೇಶದಲ್ಲಿ 562 ಸಂಸ್ಥಾನಗಳಿದ್ದವು. ಬಹುತೇಕ ಸಂಸ್ಥಾನಗಳು ಭಾರತದ ಜೊತೆ ಸೇರ್ಪಡೆಯಾದರೆ, ಹೈದರಾಬಾದಿನ ನಿಜಾಮ ಸೇರಿದಂತೆ ಇತರರು ದೇಶ ಒಕ್ಕೂಟಕ್ಕೆ ಸೇರಲು ನಿರಾಕರಿಸಿದರು. ಆಗ ಸರ್ದಾರ್ ವಲ್ಲಭಬಾಯಿ ಪಟೇಲ್ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಾದ ಮಂಡಿಸಿ ಸೇನಾ ಬಲವನ್ನು ಬಳಸಲು ಅನುಮತಿ ಪಡೆದುಕೊಂಡರು. ಸೇನಾ ಕಾರ್ಯಾಚರಣೆ ನಡೆದಾಗ ಹೈದರಾಬಾದ್‍ನ ನಿಜಾಮ ಖಾಸಿಮ್ ಮೂರು ದಿನಗಳಲ್ಲೇ ಓಡಿ ಹೋದ ಉದಾಹರಣೆ ಇದೆ ಎಂದರು.
ನೆಹರು ಅವರನ್ನು ಟೀಕಿಸುವ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾವ ತ್ಯಾಗ, ಬಲಿದಾನವನ್ನು ಮಾಡಿಲ್ಲ. ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ಹೋರಾಟ ನಡೆಸಿದರು. ಮಹಾತಗಾಂಧಿಜಿ, ಸುಭಾಷ್‍ಚಂದ್ರಬೋಸ್ ಮತ್ತಿತರರ ಶ್ರಮದ ಫಲದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರು.
ಆರ್‍ಎಸ್‍ಎಸ್‍ನ ಸಾವರ್ಕರ್, ಗೋಳ್ವಾರ್ಕರ್, ಹೆಡ್ಗೆವಾರ್ ಸೇರಿದಂತೆ ಯಾರೂ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಲಿಲ್ಲ. ಈಗ ಬಿಜೆಪಿಯವರು ಮಹಾನ್ ದೇಶ ಭಕ್ತರಂತೆ ಮಾತನಾಡುತ್ತಾರೆ. ಇದು ಢೋಂಗಿತನ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ʼನವ್ರು ಸಂವಿಧಾನ ವಿರೋಧಿಸಿದ್ರು
ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದವರೂ ಮತ್ತು ಸ್ವಾತಂತ್ರ್ಯ ತಂದು ಕೊಟ್ಟವರು ಕಾಂಗ್ರೆಸ್ಸಿಗರು. 1925 ರಲ್ಲಿ ಆರ್‍ಎಸ್‍ಎಸ್ ಸ್ಥಾಪನೆಯಾಯಿತು. ಆ ವೇಳೆ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪದಲ್ಲಿತ್ತು. ಆದರೆ ಆರ್‍ಎಸ್‍ಎಸ್‍ನವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ಸಂವಿಧಾನವನ್ನೂ ವಿರೋಧ ಮಾಡಿದ್ದು, ಸಾವರ್ಕರ್ ಮತ್ತು ಗೋಳ್ವಾರ್ಕರ್. ಮನುವಾದದ ಮೇಲೆ ನಂಬಿಕೆ ಇಟ್ಟುಕೊಂಡ ಆರ್‍ಎಸ್‍ಎಸ್‍ನವರು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದು ಟೀಕಿಸಿದರು.
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್, ಎಂ. ಚಂದ್ರಪ್ಪ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.





