ಬೆಂಗಳೂರು: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಿಕ್ಕು ಅನೇಕ ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಇಂದು(ಜನವರಿ.29) ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಕಾಲ್ತುಳಿತದಲ್ಲಿ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರನ್ನು ಕ್ಷೇಮವಾಗಿ ರಾಜ್ಯಕ್ಕೆ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು, ನಮ್ಮವರ ರಕ್ಷಣೆಗೆ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಹೀಗಾಗಿ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ. ರಾಜ್ಯದ ಜನತೆಯೊಂದಿಗೆ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿರಲಿದೆ ಎಂದು ಹೇಳಿದ್ದಾರೆ.