ಚಿಕ್ಕಬಳ್ಳಾಪುರ: ಕಲುಷಿತ ನೀರು ಸೇವನೆ, ಒಂದೇ ಗ್ರಾಮದ ನಾಲ್ವರು ಸಾವು

ಚಿಕ್ಕಬಳ್ಳಾಪುರ: ವಾಂತಿ ಭೇದಿಯಿಂದ ಬಳಲಿ ಒಂದೇ ಗ್ರಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ವೀರಪಲ್ಲಿ ಗ್ರಾಮದಲ್ಲಿ ನಡೆದಿದೆ.

ಕಲುಷಿತ ನೀರು ಸೇವೆನೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಐದುನೈದು ದಿನಗಳಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದು, ಆರೋಗ್ಯ ಸಿಬ್ಬಂದಿಗಳು ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆದಿದೆ.

ಗ್ರಾಮದಲ್ಲಿ ಬಹುತೇಕ ಕುಡಿಯುವ ನೀರಿನ ಪೈಪ್‌ಗಳನ್ನು ಒಳ ಚರಂಡಿಗಳಲ್ಲಿ ಅಳವಡಿಸಲಾಗಿದೆ. ಚರಂಡಿಗಳಲ್ಲೇ ಕುಡಿಯುವ ನೀರಿನ ಪೈಪ್‌ಗಳನ್ನು ದುರಸ್ಥಿ ಮಾಡಲಾಗುತ್ತದೆ. ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಗೆ ಸೇರಿದೆ. ಈ ಕಲುಷಿತ ನೀರು ಸೇವಿಸಿದ ಗ್ರಾಮದ ಕೆಲವರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಕಳೆದ 15 ದಿನಗಳಿಂದ ಗ್ರಾಮದ ಗಂಗಮ್ಮ(70), ಮುನಿನಾಗಮ್ಮ(70) ಲಕ್ಷ್ಮಮ್ಮ(70) ಹಾಗೂ ನರಸಿಂಹಪ್ಪ(75) ವಾಂತಿ ಭೇದಿಯಿಂದ ಬಳಲಿ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿಲ್ಲವೆಂದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.