ಬೆಂಗಳೂರು: ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಹಿನ್ನೆಲೆ ಸಮೀಕ್ಷೆಯು ನಿಗದಿಯಂತೆ ಇದೇ ತಿಂಗಳ.22ರಿಂದ ಆರಂಭವಾಗಲಿದ್ದು, ಆವರಿಸಿದ್ದ ಕಾರ್ಮೋಡಗಳು ತೆರೆಗೆ ಸರಿದಿದೆ.
ಸಮೀಕ್ಷೆಗೆ ಕೆಲವು ಸಚಿವರೇ ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸೋಮವಾರದಿಂದ ನಡೆಸಲು ಉದ್ದೇಶಿಸಿದ ಸಮೀಕ್ಷೆಯೇ ಡೋಲಾಯಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸಂಪುಟದ ಸಹದ್ಯೋಗಿಗಳ ಜೊತೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ನಿಗದಿತ ದಿನದಂದೇ ನಡೆಸಲು ನಿರ್ಧರಿಸಲಾಯಿತು.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿದ್ದು, ಈಗಾಗಲೇ ನಿಗದಿಯಾಗಿರುವಂತೆ 22ರಿಂದ ಶೈಕ್ಷಣಕ, ಸಾಮಾಜಿಕ ಸ್ಥಿತಿಗತಿ ಸಮೀಕ್ಷೆ ನಡೆಯಲಿದೆ. ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸ್ವಾಯತ್ತ ಸಂಸ್ಥೆ ಇದರಲ್ಲಿನಾವು ಹಸ್ತಕ್ಷೇಪ ಮಾಡಲು ಬರುವುದಿಲ್ಲ. ತೀರ್ಮಾನವಾದ ಮೇಲೆ ಮುಂದೂಡಿ ಎಂದು ಹೇಳಲು ಹೇಗೆ ಸಾಧ್ಯ? ಯಾರು ಏನೇ ಹೇಳಿಕೊಂಡರೂ ನಿಗದಿತ ದಿನಾಂಕದಂದೇ ನಡೆಯಲಿದೆ ಎಂದು ತಿಳಿಸಿದರು.
ಸಮೀಕ್ಷೆ ಬಗ್ಗೆ ಸಚಿವರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಕೆಲವರನ್ನು ಸ್ಪಷ್ಟನೆಯನ್ನು ಮಾತ್ರ ಕೇಳಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ ಎಂದು ಎಚ್ಚರಿಸಿದೆ.
ಬಿಜೆಪಿಯವರು ಅನಗತ್ಯವಾಗಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಮುಂದೂಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ಆಯೋಗವು ಈಗಾಗಲೇ ಅಗತ್ಯವಾದ ಸಿದ್ದತೆಯನ್ನು ಕೈಗೊಂಡಿದೆ ಎಂದು ಸಿಎಂ ಹೇಳಿದರು.





