ಮಂಡ್ಯ: ಪ್ರಿಯಾಂಕ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು. ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಅವರು ಟೀಕಿಸಿದರು.