ಮೈಸೂರು : ಕೆಎಸ್‌ಆರ್‌ಟಿಸಿ ನೌಕರರು ಮೇ 20ರಿಂದ ಅನಿಧಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಖಾಸಗಿ ವಾಹನ ಮಾಲೀಕರ ಸಂಘ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ನಗರ ವಿಭಾಗದಲ್ಲಿ 534 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, 517 ಶೆಡ್ಯೂಲ್‌ಗಳಿವೆ. ಗ್ರಾಮೀಣ ವಿಭಾಗದಲ್ಲಿ 720 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, 691 ಶೆಡ್ಯೂಲ್‌ಗಳಿವೆ. ಕೆಎಸ್‌ಆರ್‌ಟಿಸಿ ನೌಕರರು ಮೇ 20ರಂದು ಬಸ್‌ಗಳನ್ನು ಚಾಲನೆ ಮಾಡದಿದ್ದಲ್ಲಿ ರೂಟ್ ಮ್ಯಾಪ್ ಸಿದ್ಧಪಡಿಸಿಕೊಳ್ಳಬೇಕು ಎಂದರು.
ಕೆಎಸ್‌ಆರ್‌ಟಿಸಿ, ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯನಿ ರ್ವಹಿಸಿ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೆಎಸ್‌ಆರ್‌ಟಿಸಿ ಸಬ್ ಅರ್ಬನ್ ಹಾಗೂ ಸಿಟಿ ಬಸ್ ನಿಲ್ದಾಣದಲ್ಲಿ ಕಂಟ್ರೋಲ್ ರೂಂಗಳಲ್ಲಿ ಖಾಸಗಿ ಬಸ್, ಮಾಕ್ಸಿ ಕ್ಯಾಬ್, ಮಿನಿಬಸ್‌ಗಳ ಟ್ರಿಪ್‌ಗಳ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ನೀಡಬೇಕು ಎಂದು ಸೂಚಿಸಿದರು.
ಸಬ್‌ಅರ್ಬನ್ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ತಾಲ್ಲೂಕುಗಳು ಸೇರಿದಂತೆ ಇತರೆ ಬಸ್ ನಿಲ್ದಾಣಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ ಬಂದೋಬಸ್ತ್‌ಗೆ ಸಿದ್ಧತೆ ಮಾಡಿಕೊಳ್ಳಬೇಕು. ಮುಷ್ಕರದ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಅಹಿತಕರ ಘಟನೆ ಸಂಭವಿಸುವ ರೀತಿ ಸನ್ನಿವೇಶ ಸೃಷ್ಟಿಸಿದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.
‘ಹೆಚ್ಚುವರಿ ಶುಲ್ಕ ವಸೂಲಿ ಮಾಡಬೇಡಿ’
ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವನ್ನು ಮುಂದಿಟ್ಟುಕೊಂಡು ಖಾಸಗಿ ಬಸ್, ಮಿನಿ ಬಸ್‌ಗಳವರು ಸಾರ್ವಜನಿಕರ ಬಳಿ ಹೆಚ್ಚುವರಿ ಶುಲ್ಕ ವಸೂಲಿ ಮಾಡದೇ ಈಗಾಗಲೇ ತಾವು ನಿಗದಿಪಡಿಸಿರುವ ರೀತಿ ದರವನ್ನು ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಸುಂದರ್ ರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಚೌಹಾಣ್, ಮಾಧುರಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ವೀರೇಶ್, ಶ್ರೀನಿವಾಸ್, ಖಾಸಗಿ ವಾಹನಗಳ ಸಂಘದ ಸದಸ್ಯರು ಹಾಜರಿದ್ದರು.




