Mysore
28
scattered clouds

Social Media

ಸೋಮವಾರ, 16 ನವೆಂಬರ್ 2026
Light
Dark

ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ; ರಸ್ತೆಗಿಳಿದ ಗ್ರಾಮಸ್ಥರು!

ಹಾಸನ: ಮೂರು ದಿನಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ! ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದೆ.

ನಾಗೇನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ 57 ವರ್ಷದ ಹಫೀಜುರ್‌ ರೆಹಮಾನ್‌ ಅವರನ್ನು ಕಾಡಾನೆ ತುಳಿದು ಸಾಯಿಸಿದೆ. ಶನಿವಾರವಷ್ಟೇ ಚೌಡನಹಳ್ಳಿಯ ಜಯಮ್ಮ ಕಾಡಾನೆ ದಾಳಿಗೆ ಬಲಿಯಾಗಿದ್ದರು.

ಮತ್ತೊಂದು ಸಾವಿನ ಬೆನ್ನಲ್ಲೇ ಬೇಲೂರು ತಾಲೂಕು ಆಸ್ಪತ್ರೆ ಎದುರು ನೂರಾರು ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಅಂಬುಲೆನ್ಸ್‌ ತಡೆದು, ಮೃತದೇಹವನ್ನು ಘಟನಾ ಸ್ಥಳಕ್ಕೆ ಕೊಂಡೊಯ್ಯುವಂತೆ ಪಟ್ಟು ಹಿಡಿದಿದ್ದಾರೆ.

ನಾಗೇನಹಳ್ಳಿಯಲ್ಲೂ ರಸ್ತೆ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವಿನ ತಳ್ಳಾಟದಲ್ಲಿ ಅರೇಹಳ್ಳಿ ಪಿಎಸ್‌ಐ ಯೋಗಭರಂ ಅವರ ಕೈಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಬೇಲೂರು ಭಾಗದ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸಲು ಆದೇಶಿಸಲಾಗಿದ್ದು, ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆದಿತ್ತು. ಈ ಮಧ್ಯೆಯೇ ಮತ್ತೊಂದು ಜೀವ ಬಲಿಯಾಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:
error: Content is protected !!