Mysore
19
clear sky

Social Media

ಶುಕ್ರವಾರ, 06 ಡಿಸೆಂಬರ್ 2024
Light
Dark

ಉಪಚುನಾವಣೆ ಸೋಲು: ಕಾರ್ಯಕರ್ತರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಸೋಲು ಕಂಡ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರಿಗೆ ಪತ್ರದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧೈರ್ಯ ತುಂಬಿದ್ದಾರೆ.

ಈ ಕುರಿತು ಇಂದು(ನ.26) ತಮ್ಮ ಎಕ್ಸ್‌ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಅವರು, ಉಪಚುನಾವಣೆ ಫಲಿತಾಂಶಗಳು ಪಕ್ಷ ಸಂಘಟನೆಯ ಸಾಮರ್ಥ್ಯ ಹಾಗೂ ಪ್ರಭಾವವನ್ನು ಬಿಂಬಿಸುವ ಅಳತೆಗೋಲಾಗಿರುವುದಿಲ್ಲ. ಸ್ಥಳೀಯ ಸಮಸ್ಯೆಗಳು ಹಾಗೂ ಸರ್ಕಾರದ ಪ್ರಭಾವವನ್ನು ಆಧರಿಸಿ ಈ ಚುನಾವಣಾ ಫಲಿತಾಂಶಗಳು ಹೊರಹೊಮ್ಮುತ್ತವೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಪತ್ರದಲ್ಲಿ ಏನಿದೆ?

ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷವಾದ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯವಾಗಿದೆ. ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ. ಈ ಫಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ ಎಂದಿದ್ದಾರೆ.

ಭಾರತೀಯ ಜನತಾ ಪಾರ್ಟಿ ಅಧಿಕಾರದ ಬೆನ್ನು ಹತ್ತಿ ರಾಜಕಾರಣ ಮಾಡುವುದಕ್ಕಾಗಿ ಜನ್ಮ ತಾಳಿದ್ದಲ್ಲ. ಬದಲಾಗಿ ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷವಾಗಿದೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಯ ಪ್ರತಿ ಹಂತವೂ ಚಾರಿತ್ರಿಕ ದಾಖಲೆಯಾಗಿದ್ದು, ಪಕ್ಷದ ಕಾರ್ಯಕರ್ತರಾಗಿ ನಾವೆಲ್ಲರೂ ಹೆಮ್ಮೆಪಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಹೆಬ್ಬಾಗಿಲು ತೆರೆದು ಕೊಟ್ಟ ರಾಜ್ಯ ‘ಕರ್ನಾಟಕ’ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದು ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದೊಂದಿಗೆ ಹತ್ತು ಹಲವು ಹಗರಣಗಳಲ್ಲಿ ಸಿಲುಕಿಕೊಂಡು ರಾಜ್ಯದ ಗೌರವ ಹಾಗೂ ಘನತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗುವಂತಾಗಲು ಕಾರಣವಾಗಿದೆ. ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬ್ಯಾಂಕಿನ ಖಾತೆಗೆ ಖನ್ನ ಹಾಕಿ ಲಪಟಾಯಿಸಿದ ಪ್ರಕರಣವೂ ದೇಶದ ಇತಿಹಾಸದಲ್ಲಿಯೇ ಮೊದಲನೇಯದಾಗಿದೆ. ಅಲ್ಲದೇ ವಕ್ಸ್ ಕಾಯ್ದೆ ಹೆಸರಿನಲ್ಲಿ ರೈತರು, ಮಠಮಾನ್ಯಗಳು ಹಾಗೂ ದೇವಸ್ಥಾನಗಳ ಆಸ್ತಿ ಆಕ್ರಮಿಸಲು ಕಠೋರ ನಿಲುವಿನ ಅಸ್ತ್ರ ಬಳಸಿದ್ದು ಇದೇ ಮೊದಲು ಎಂದು ಹೇಳಿದರೆ ತಪ್ಪಾಗಲಾರದು. ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಕಡು ಬಡವರ ಅನ್ನದ ತಟ್ಟೆಯನ್ನು ನಿರ್ದಯವಾಗಿ ಈ ಸರ್ಕಾರ ಕಿತ್ತುಕೊಳ್ಳಲು ಹೊರಟಿದ್ದೇಕೆ ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ತಪ್ಪೇ ಮಾಡದಿದ್ದರೆ, ಅಕ್ರಮವಾಗಿ ನಿವೇಶನಗಳನ್ನು ಪಡೆಯದಿದ್ದರೆ 14 ನಿವೇಶನಗಳನ್ನು ಮುಡಾಗೆ ಒಪ್ಪಿಸಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಇಂದಿಗೂ ಜೀವಂತ. ಕಾನೂನು ವ್ಯವಸ್ಥೆಯಲ್ಲಿ ಇದು ತಾರ್ಕಿಕ ಅಂತ್ಯ ಕಾಣುವವರೆಗೂ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಕೆಲವು ಮಂತ್ರಿಗಳು ಪ್ರಾಮಾಣಿಕತೆಯ ಮಾತನಾಡುವ ನೈತಿಕತೆ ಹೊಂದಲು ಸಾಧ್ಯವೇ ಇಲ್ಲ. ಹಣ ಬಲ, ಅಧಿಕಾರ ಬಲದ ಜೊತೆಗೆ ಚುನಾವಣೆಯ ಹಿಂದಿನ ದಿನವನ್ನು ಗುರಿಯನ್ನಾಗಿಸಿಕೊಂಡು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಮತದಾರರ ಖಾತೆಗೆ ಹಾಕಿದ್ದು ಚುನಾವಣೆಯ ಅನೈತಿಕತೆಯಲ್ಲದೇ ಮತ್ತಿನ್ನೇನು? ದುರ್ಮಾರ್ಗಗಳನ್ನು ಬಳಸಿ ಉಪಚುನಾವಣೆಯನ್ನು ಗೆಲ್ಲುವುದು ಆಡಳಿತ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಹೊಸತೇನೂ ಅಲ್ಲ, ಈ ನಿಟ್ಟಿನಲ್ಲಿ ಈ ಚುನಾವಣೆಯ ಅಪಜಯವನ್ನು ನಾವ್ಯಾರೂ ಹಿನ್ನೆಡೆ ಎಂದು ಪರಿಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

Tags: